ಸುಶಾಂತ್ ಸಿಂಗ್ ಪುಣ್ಯತಿಥಿ: ನಟನನ್ನು ಸ್ಮರಿಸಿದ ಸ್ನೇಹಿತರು, ಅಭಿಮಾನಿಗಳು

ಹೈಲೈಟ್ಸ್‌:

  • ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪುಣ್ಯತಿಥಿ
  • ಸುಶಾಂತ್ ಸಿಂಗ್ ರಜಪೂತ್ ಮೊದಲನೇ ವರ್ಷದ ಪುಣ್ಯಸ್ಮರಣೆ
  • ಸುಶಾಂತ್‌ರನ್ನ ಸ್ಮರಿಸಿದ ಸ್ನೇಹಿತರು ಮತ್ತು ಅಭಿಮಾನಿಗಳು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷ. ಜೂನ್ 14, 2020 ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಸುಶಾಂತ್ ಸಿಂಗ್ ನಿಗೂಢ ಸಾವು ಮತ್ತು ಅದಕ್ಕೆ ಸಂಬಂಧಿಸಿರಬಹುದು ಎನ್ನಲಾದ ಡ್ರಗ್ಸ್ ಆಯಾಮ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಿಬಿಐ, ಎನ್‌ಸಿಬಿ ಮತ್ತು ಇಡಿ ತನಿಖೆ ನಡೆಸುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ಕೊನೆಯುಸಿರೆಳೆದು ಒಂದು ವರ್ಷ ಕಳೆದರೂ ಅಭಿಮಾನಿಗಳ ಕೂಗು ಕೊಂಚ ಕೂಡ ಕಡಿಮೆ ಆಗಿಲ್ಲ. ಮೊದಲನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಸುಶಾಂತ್ ಸಿಂಗ್ ಅವರ ಸ್ಮರಣೆ ಮಾಡುತ್ತಿರುವ ಅಭಿಮಾನಿಗಳು ”ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ” ಎಂದೇ ವಾದಿಸುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ಸದ್ಯ #SushantSinghRajput #Murdered #SSRians #SushantJusticeMatters ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.

ಸುಶಾಂತ್ ಸಿಂಗ್ ಸಾವಿನ ಹಿಂದಿರುವ ನಿಜವಾದ ಕಾರಣ ಮತ್ತು ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.

ಸುಶಾಂತ್ ಪುಣ್ಯತಿಥಿ ಪ್ರಯುಕ್ತ ಅಂಕಿತಾ ಮನೆಯಲ್ಲಿ ಹೋಮ-ಹವನ
ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿ, ನಟಿ ಅಂಕಿತಾ ಲೋಖಂಡೆ ಮನೆಯಲ್ಲಿ ಹೋಮ-ಹವನ ಮಾಡಲಾಗಿದೆ. ಸುಶಾಂತ್ ಸಿಂಗ್ ಪುಣ್ಯತಿಥಿ ಪ್ರಯುಕ್ತ ನಟಿ ಅಂಕಿತಾ ಹೋಮ ನೆರವೇರಿಸಿ, ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಸುಶಾಂತ್‌ರನ್ನ ಸ್ಮರಿಸಿದ ಸಂಜಯ್ ಪುರನ್ ಸಿಂಗ್ ಚೌಹಾಣ್
ಸುಶಾಂತ್‌ಗೆ ನಿರ್ದೇಶಕ ಸಂಜಯ್ ಪುರನ್ ಸಿಂಗ್ ಚೌಹಾಣ್ ಆತ್ಮೀಯ ಸ್ನೇಹಿತರಾಗಿದ್ದರು. ಸುಶಾಂತ್ ಪುಣ್ಯತಿಥಿ ಪ್ರಯುಕ್ತ ಸಂಜಯ್ ಪುರನ್ ಸಿಂಗ್ ಚೌಹಾಣ್ Etimes ಜೊತೆಗೆ ಮಾತನಾಡಿದ್ದಾರೆ. ಸುಶಾಂತ್ ಜೊತೆಗಿನ ನೆನಪುಗಳನ್ನು ಸಂಜಯ್ ಪುರನ್ ಸಿಂಗ್ ಚೌಹಾಣ್ ಮೆಲುಕು ಹಾಕಿದ್ದಾರೆ.

”ನನ್ನ ಮತ್ತು ಸುಶಾಂತ್ ನಡುವಿನ ಸಂಬಂಧ ನಟ ಮತ್ತು ನಿರ್ದೇಶಕರ ನಡುವಿನ ಸಂಬಂಧಕ್ಕಿಂತ ಮಿಗಿಲಾಗಿತ್ತು. ಆತ್ಮೀಯ ಸ್ನೇಹಿತರಾಗಿದ್ದ ನಾವು ಎಲ್ಲದರ ಬಗ್ಗೆಯೂ ಚರ್ಚೆ ಮಾಡುತ್ತಿದ್ವಿ. ಎಲ್ಲವನ್ನೂ ಸುಶಾಂತ್ ಪಕ್ಕಾ ಪ್ಲಾನ್ ಮಾಡುತ್ತಿದ್ದರು. ಒಮ್ಮೆ ಲೋನಾರ್ ಲೇಕ್ ಬಳಿ ಕುಳಿತು ಕಥೆಯ ಬಗ್ಗೆ ಚರ್ಚೆ ಮಾಡೋಣ ಎಂದಿದ್ದರು. ಅವರಿಗೆ ಕಥೆ ಹೇಳೋಕೆ ನನಗೆ ತುಂಬಾ ಇಷ್ಟವಾಗುತ್ತಿತ್ತು. ಕಥೆಗೆ ಅವರು ಒಳ್ಳೊಳ್ಳೆ ಅಂಶಗಳನ್ನು ಸೇರಿಸುತ್ತಿದ್ದರು. ಲಡಾಖ್‌ಗೆ ಹೋಗಿದ್ದಾಗ ತಮ್ಮ ಟೆಲಿಸ್ಕೋಪ್‌ನ ಜೊತೆಯಲ್ಲೇ ತೆಗೆದುಕೊಂಡು ಹೋಗಿದ್ದರು. ಒಂದು ಸ್ಪೇಸ್ ಫಿಲ್ಮ್ ನಿರ್ದೇಶನ ಮಾಡುವ ಆಸೆ ಅವರಿಗಿತ್ತು. ಎಲ್ಲೋರಾಗೆ ತೆರಳಿ ಅಲ್ಲಿನ ಕೈಲಾಸ ದೇವಾಲಯ ನೋಡಬೇಕು ಅಂತ ಸುಶಾಂತ್ ಹೇಳುತ್ತಿದ್ದರು. ಎಷ್ಟೋ ಆಸೆ, ಕನಸು ಈಡೇರುವ ಮುನ್ನವೇ ಸುಶಾಂತ್ ನಮ್ಮನ್ನೆಲ್ಲ ಬಿಟ್ಟು ಹೋದರು” ಎಂದಿದ್ದಾರೆ ಸಂಜಯ್ ಪುರನ್ ಸಿಂಗ್ ಚೌಹಾಣ್.

ಸುಶಾಂತ್‌ರನ್ನ ಸ್ಮರಿಸಿದ ಅಮಿತ್ ಸಾದ್
ಸುಶಾಂತ್ ಸಿಂಗ್ ರಜಪೂತ್‌ಗೆ ಅಮಿತ್ ಸಾದ್ ಕೂಡ ಆತ್ಮೀಯರು. ಸುಶಾಂತ್ ಪುಣ್ಯತಿಥಿ ಪ್ರಯುಕ್ತ ಸುಶಾಂತ್‌ರನ್ನ ಅಮಿತ್ ಸಾದ್ ಸ್ಮರಿಸಿದ್ದಾರೆ. ಸುಶಾಂತ್ ಸಿಂಗ್ ಬಗ್ಗೆ ಬಾಂಬೆ ಟೈಮ್ಸ್ ಜೊತೆಗೆ ಅಮಿತ್ ಸಾದ್ ಮಾತನಾಡಿದ್ದಾರೆ.

”ಸುಶಾಂತ್ ನಮ್ಮೊಂದಿಗಿಲ್ಲ ಎಂಬುದನ್ನ ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ನಾನು ಯಾವಾಗಲೂ ಸುಶಾಂತ್‌ರನ್ನ ನೆನಪಿಸಿಕೊಳ್ಳುತ್ತಿರುತ್ತೇನೆ. ಅವರನ್ನು ಮಿಸ್ ಮಾಡಿಕೊಂಡಾಗಲೆಲ್ಲ ಅವರ ಚಿತ್ರಗಳನ್ನು ನೋಡುತ್ತೇನೆ” ಎಂದು ಅಮಿತ್ ಸಾದ್ ಹೇಳಿದ್ದಾರೆ

ಸುಶಾಂತ್ ಸ್ಮರಣೆ ಮಾಡಿದ ರೂಮಿ ಜಾಫ್ರಿ
”ಬಾಲಿವುಡ್‌ನಲ್ಲಿ ಹಲವು ವರ್ಷಗಳ ಕಾಲ ಕಳೆದ ಮೇಲೆ ನಾನು ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಸಂಜಯ್ ದತ್, ಗೋವಿಂದಾ ಜೊತೆಗೆ ಆತ್ಮೀಯವಾಗಿದ್ದೇನೆ. ಯುವ ನಟರ ಪೈಕಿ ಸುಶಾಂತ್ ನನ್ನೊಂದಿಗೆ ಆತ್ಮೀಯವಾಗಿದ್ದರು. ನನ್ನ ಮಕ್ಕಳ ಜೊತೆಗೆ ಸುಶಾಂತ್ ತುಂಬಾ ಮಾತನಾಡುತ್ತಿದ್ದರು. ಸುಶಾಂತ್ ತುಂಬಾ ಓದಿಕೊಂಡಿದ್ದರು. ಯಾವುದೇ ಟಾಪಿಕ್ ಕೊಟ್ಟರೂ ಮಾತನಾಡುತ್ತಿದ್ದರು. ಅವರು ಅಪ್ಪಟ ಶಿವ ಭಕ್ತರು” ಎಂದು ರೂಮಿ ಜಾಫ್ರಿ ತಿಳಿಸಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *