ವಿಶ್ವ ರಕ್ತದಾನಿಗಳ ದಿನಾಚರಣೆ: ಅಗತ್ಯ ಸಂದರ್ಭದಲ್ಲಿ ರಕ್ತದಾನ ಮಾಡಲು ಕರೆ
ಕಲಬುರಗಿ,ಜೂ.14(ಕ.ವಾ)- ವಿಶ್ವ ರಕ್ತದಾನಿಗಳ ದಿನ ಅಷ್ಟೇ ಅಲ್ಲದೇ ಅಗತ್ಯ ಮತ್ತು ತುರ್ತು ಸಂದರ್ಭದಲ್ಲಿ ಎಲ್ಲರೂ ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಕರೆ ನೀಡಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆ ರೆಡ್ ಕ್ರಾಸ್ ವತಿಯಿಂದ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲು ಆಗಿರಲಿಲ್ಲ. ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಅಭಾವ ಉಂಟಾಗಿತ್ತು. ಇಂದಿಲ್ಲಿ ಅನೇಕರು ರಕ್ತದಾನ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶರಣು ಪಪ್ಪಾ, ಸಿದ್ದರಾಜ ಬಿರಾದಾರ, ಶ್ರೀಶೈಲ ಮೂಲಗೆ, ಸಿದ್ದಲಿಂಗ ಪಾಟೀಲ್ ಅವರಿಗೆ ಸನ್ಮಾನ ಮಾಡಲಾಯಿತು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ಓರಿಯಂಟಲ್ ಸಿಮೆಂಟ್ ಕಾರ್ಖಾನೆಯ ಜನರಲ್ ಮ್ಯಾನೇಜರ್ ಶಿವಾನಂದ ಪಾಟೀಲ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಅರುಣಕುಮಾರ್ ಲೋಯಾ, ಕಾರ್ಯದರ್ಶಿ ರವೀಂದ್ರ ಶಾಬಾದಿ, ಖಜಾಂಚಿ ಭಾಗ್ಯಲಕ್ಷ್ಮಿ ಎಂ, ರಕ್ತದಾನ ಶಿಬಿರದ ಸಂಯೋಜಕ ಜಿ.ಎಸ್. ಪದ್ಮಜಿ ಮತ್ತಿತರರು ಉಪಸ್ಥಿತರಿದ್ದರು. ಶಿವರಾಜ ಅಂಡಗಿ ನಿರೂಪಿಸಿದರು.