Explained: ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಜ್ವರ ಬಂದಿಲ್ಲ, ಹಾಗಿದ್ರೆ ಲಸಿಕೆ ಕೆಲಸ ಮಾಡ್ತಿಲ್ವಾ?
Corona Vaccine: ಹೀಗೊಂದು ಅನುಮಾನ ಅನೇಕರನ್ನು ಕಾಡುತ್ತಿದೆ. ಬಹುಪಾಳು ಜನರಿಗೆ ಮೊದಲ ಡೋಸ್ ಅಥವಾ ಎರಡೂ ಡೋಸ್ ಲಸಿಕೆ ಪಡೆಯುವಾಗ ಜ್ವರ, ಕೈನೋವು, ಮೈಕೈ ನೋವು ಮುಂತಾದ ನಾನಾ ಬಗೆಯ ಅಡ್ಡಪರಿಣಾಮಗಳು ಕಂಡುಬಂದಿವೆ. ಆದ್ರೆ ಕೆಲವರಿಗೆ ಮಾತ್ರ ಯಾವ ಲಕ್ಷಣಗಳೂ ಇಲ್ಲ. ಲಸಿಕೆ ತೆಗೆದುಕೊಂಡೆವು, ಈಗ ಆರಾಮಾಗಿದ್ದೇವೆ ಎನ್ನುತ್ತಾರೆ. ಹಾಗಿದ್ರೆ ಯಾವ ಅಡ್ಡ ಪರಿಣಾಮವೂ ಆಗಿಲ್ಲ ಎಂದರೆ ಲಸಿಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥವೇ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ…
ಲಸಿಕೆ ದೇಹದೊಳಗೆ ಹೋದಾಗ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೋವಿಡ್ ವಿರುದ್ಧ ಬಡಿದೆಬ್ಬಿಸುತ್ತದೆ. ಅದನ್ನು ಆಟೋ ಇಮ್ಯೂನ್ ರೆಸ್ಪಾನ್ಸ್ ಎನ್ನುತ್ತಾರೆ. ಇದು ದೇಹದೊಳಗೆ ಹೋದ ರಾಸಾಯನಿಕ ಅಥವಾ ಸತ್ತ ವೈರಸ್ಗೆ ನಮ್ಮ ದೇಹ ನೀಡುವ ಪ್ರತಿಕ್ರಿಯೆ. ನೀವು ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ಸೇರಿದಂತೆ ಯಾವ ಲಸಿಕೆ ತೆಗೆದುಕೊಂಡರೂ ದೇಹದೊಳಗೆ ಈ ಪ್ರತಿಕ್ರಿಯೆ ಆಗೇ ಆಗುತ್ತದೆ. ಅದರಲ್ಲೂ ಸಣ್ಣ ವಯಸ್ಸಿನವರಿಗೆ ಈ ಪ್ರತಿಕ್ರಿಯೆ ತುಸು ಹೆಚ್ಚೇ ಎನ್ನುವಂತೆ ಆಗುತ್ತದೆ. ಅವರಿಗೇ ಜ್ವರ, ಮೈಕೈ ನೋವು, ಸುಸ್ತು ಮುಂತಾದ ಸೈಡ್ ಎಫೆಕ್ಟ್ ಗಳು ಜಾಸ್ತಿ.
ಹಾಗಂತ ಯಾವುದೇ ಸಮಸ್ಯೆ ಉಂಟಾಗದೆ ಆರಾಮಾಗಿದ್ದೀರಾ ಎಂದ ಕೂಡಲೇ ಈ ಲಸಿಕೆ ಕೆಲಸ ಮಾಡುತ್ತಿಲ್ಲ ಎಂದುಕೊಳ್ಳಬಾರದು. ದೇಹದ ಒಳಗೆ ರೋಗನಿರೋಧಕ ಶಕ್ತಿಯನ್ನು ಪ್ರತಿಯೊಬ್ಬರಲ್ಲೂ ಲಸಿಕೆ ಚುರುಕುಗೊಳಿಸಿರುತ್ತದೆ. ವ್ಯಕ್ತಿಯ ವಯಸ್ಸು, ಲಿಂಗ, ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳು, ಪೌಷ್ಟಿಕಾಂಶ, ಹೀಗೆ ನಾನಾ ವಿಚಾರಗಳ ಆಧಾರದ ಮೇಲೆ ಲಸಿಕೆಯ ಕೆಲಸದ ವೈಖರಿ ನಿರ್ಧರಿತವಾಗುತ್ತದೆ. ಹಾಗಾಗಿ ಒಂದು ವೇಳೆ ನಿಮಗೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದೇ ಇದ್ದರೂ ನೀವು ಸೇಫ್ ಆಗೇ ಇದ್ದೀರಾ ಮತ್ತು ಲಸಿಕೆ ನಿಮ್ಮಲ್ಲೂ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದೇ ಅರಿಯಬೇಕು.
ಫೈಜರ್ ಲಸಿಕೆಯ ಟ್ರಯಲ್ಗಳನ್ನು ಮಾಡಿದಾಗ ಅರ್ಧದಷ್ಟು ಅಂದರೆ ಶೇಕಡಾ 50ರಷ್ಟು ಜನರಿಗೆ ಯಾವುದೇ ರೀತಿಯ ಅಡ್ಡಪರಿಣಾಮ ಉಂಟಾಗಿರಲಿಲ್ಲ. ಆದರೂ ಶೇಕಡಾ 90 ಜನರಿಗೆ ಉತ್ತಮವಾಗಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿತ್ತು. ಮಾಡರ್ನಾ ಲಸಿಕೆಯಲ್ಲಿ 10ರಲ್ಲಿ ಒಬ್ಬರಿಗೆ ಮಾತ್ರ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ವರದಿಯಾಗಿದೆ. ಆದರೆ ಸೋಂಕಿನಿಂದ ಶೇಕಡಾ 95ರಷ್ಟು ರಕ್ಷಣೆ ಇದೆ ಎನ್ನುವುದೂ ದೃಢವಾಗಿದೆ. ಹಾಗಾಗಿ ನೀವು ಪಡೆದ ಲಸಿಕೆ ಯಾವುದೇ ಇದ್ದರೂ ನಿಮಗೆ ಉಂಟಾಗುವ ಅಡ್ಡ ಪರಿಣಾಮಗಳು ದೇಹದ ಪ್ರತಿಕ್ರಿಯೆ ಮಾತ್ರ. ಅಡ್ಡ ಪರಿಣಾಮ ಉಂಟಾಗದೇ ಇದ್ದರೂ ದೇಹ ತನ್ನನ್ನು ತಾನು ಲಸಿಕೆಯ ಶಕ್ತಿಗಳನ್ನು ಬಳಸಿಕೊಂಡು ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲೇ ಇರುತ್ತದೆ ಎನ್ನುವುದನ್ನು ತಿಳಿಯಬೇಕು. ಅಡ್ಡ ಪರಿಣಾಮ ಆಗಲಿಲ್ಲ ಎಂದರೆ ಲಸಿಕೆ ಪಡೆದಿದ್ದು ಪ್ರಯೋಜನಕಾರಿಯಲ್ಲ ಎನ್ನುವ ಲೆಕ್ಕಾಚಾರ ತಪ್ಪು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.