ಕನ್ನಡ ಚಿತ್ರರಂಗದ ಖ್ಯಾತ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವ್ನಪ್ಪಿದ್ದಾರೆ.
ನಟ ಸಂಚಾರಿ ವಿಜಯ್ ದೇಹದ ಅಂಗಾಂಗಗಳನ್ನು ದಾನ ಮಾಡಿರುವುದು ತಿಳಿದಿರುವ ವಿಚಾರ. ಈಗಾಗಲೇ ಅಪೋಲೋ ಆಸ್ಪತ್ರೆಯಲ್ಲಿ ಅಂಗಾಂಗಳ ದಾನ ಪ್ರಕ್ರಿಯೆ ಪೂರ್ಣಗೊಂಡು, ವೈದ್ಯರು ನೀಡಿರುವ ಮಾಹಿತಿ ಪ್ರಕಾರ ವಿಜಯ್ ದೇಹದಿಂದ ಕಿಡ್ನಿ, ಕಣ್ಣು, ಲಿವರ್, ಹಾಗೂ ಹೃದಯ ವ್ಯಾಲ್ಸ್ ಪಡೆಯಲಾಗಿದೆ ಎಂದು ಜೀವ ಸಾರ್ಥಕತೆ ತಂಡದ ನೌಷಾದ್ ಪಾಷ ಹೇಳಿದ್ದಾರೆ. ವಿಜಯ್ ಅವರ ದೇಹದ ಅಂಗಾಗಗಳಿಂದ ಒಟ್ಟು ಏಳು ಜನರಿಗೆ ಹೊಸ ಜೀವನ ಸಿಗಲಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಗೆಯಿಂದ ದೇಹದ ಅಂಗಾಗ ದಾನದ ಪ್ರಕ್ರಿಯೆ ನಡೆದಿದ್ದು, ಇಂದು ಬೆಳಗ್ಗೆ 3.34ಕ್ಕೆ ಪೂರ್ಣಗೊಂಡಿದೆ. ಈ ಮೊದಲೇ ಅಂಗಾಂಗ ಕಸಿಗೂ ತಯಾರಿ ನಡೆಸಿದ್ದು, ವಿಜಯ್ ದೇಹದಿಂದ ತೆಗೆಯಲಾದ ಅಂಗಾಂಗಳನ್ನು ಇತರೆ ರೋಗಿಗಳಿಗೆ ಹಾಕುವ ಪ್ರಕ್ರಿಯೆ ಸಹ ನಡೆದಿದೆ ಎಂದು ತಿಳಿದು ಬಂದಿದೆ.
ಅಪೋಲೋ ಆಸ್ಪತ್ರೆಯಲ್ಲಿಯೇ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಬೆಳಗ್ಗೆ 8 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ನಂತರ ಮಧ್ಯಾಹ್ನ 12 ಗಂಟೆ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ತೀರ್ಮಾನಿಸಿದೆ.