‘ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ, ಮುಂದಿನ ಚುನಾವಣೆಗಳು ಯಾರ ನಾಯಕತ್ವದಲ್ಲೂ ನಡೆಯಲ್ಲ’; ಈಶ್ವರಪ್ಪ

ಹೈಲೈಟ್ಸ್‌:

  • ‘ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ, ಮುಂದಿನ ಚುನಾವಣೆಗಳು ಯಾರದೇ ನಾಯಕತ್ವದಲ್ಲಿ ನಡೆಯೋದಿಲ್ಲ
  • ಸಂಘಟನೆ ಹಾಗೂ ಕಾರ್ಯಕರ್ತರ ಬಲದಿಂದಲೇ ಮುಂಬರುವ ಚುನಾವಣೆಗಳು ನಡೆಯಲಿವೆ
  • ಕೇಂದ್ರ ವರಿಷ್ಠರು ತೆಗೆದುಕೊಂಡ ನಿರ್ಣಯವನ್ನು ವಿರೋಧಿಸುವಂತಹ ವ್ಯಕ್ತಿಗಳು ನಮ್ಮಲ್ಲಿಲ್ಲ
  • ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹುಬ್ಬಳ್ಳಿಯಲ್ಲಿ ಹೇಳಿಕೆ

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿ ಬೆಳೆದಿದ್ದು, ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಮುಂಬರುವ ಚುನಾವಣೆಗಳು ಯಾರದೇ ನಾಯಕತ್ವದಲ್ಲಿ ನಡೆಯುವುದಿಲ್ಲ. ಬದಲಾಗಿ ಸಂಘಟನೆ ಹಾಗೂ ಕಾರ್ಯಕರ್ತರ ಬಲದಿಂದಲೇ ನಡೆಯಲಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಹಿಂದೆ ಒಂದು ಕಾಲವಿತ್ತು. ನಮ್ಮ ಪಕ್ಷದ ಸಂಘಟನೆ ಅಷ್ಟಾಗಿ ಗಟ್ಟಿ ಇರಲಿಲ್ಲ. ಆಗ ವ್ಯಕ್ತಿ ಹಾಗೂ ಜಾತಿ ಆಧಾರದ ಮೇಲೆ ಚುನಾವಣೆ ನಡೆಸುವ ಅನಿವಾರ್ಯತೆಯಿತ್ತು. ಆದರೆ, ಈಗ ಕಾಲ ಬದಲಾಗಿದೆ. ಪಕ್ಷದ ಸಂಘಟನೆ ಬೇರು ಮಟ್ಟದಿಂದಲೇ ಗಟ್ಟಿಯಾಗಿದೆ. ಹೀಗಾಗಿ ವ್ಯಕ್ತಿ, ಜಾತಿ ಆಧಾರಿತ ಚುನಾವಣೆ ನಡೆಸುವ ಅನಿವಾರ್ಯತೆ ಪಕ್ಷಕ್ಕಿಲ್ಲ ಎಂದರು.

ಒಂದು ಕುಟುಂಬದಲ್ಲಿಯೇ ವ್ಯತ್ಯಾಸ ಇರುತ್ತದೆ. ಅದರಂತೆಯೇ ನಮ್ಮ ಪಕ್ಷದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಕೇಂದ್ರದ ವರಿಷ್ಠರು ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ರಾಜ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಈಗ ರಾಜ್ಯದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ಅಸಮಾಧಾನವನ್ನು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬಗೆಹರಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ವರಿಷ್ಠರು ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ಆ ನಿರ್ಣಯವನ್ನು ವಿರೋಧಿಸುವಂತಹ ವ್ಯಕ್ತಿಗಳು ನಮ್ಮಲ್ಲಿಲ್ಲ. ಆದಾಗ್ಯೂ ಪರ, ವಿರೋಧ ನಿಲುವು ಹೊಂದಿದವರು ತಮ್ಮ ನಿಲುವು ಬದಲಿಸಿಕೊಳ್ಳದಿದ್ದರೆ, ಪಕ್ಷದ ವರಿಷ್ಠರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ, ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸಿದ ಮೇಲೆ ವರಿಷ್ಠರು ನಿರ್ಧರಿಸುತ್ತಾರೆ. ಈಗಂತೂ ಅಂತಹ ವಾತಾವರಣ ಇಲ್ಲ. ಸರಕಾರದ ವಿರುದ್ಧ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಧಕ್ಕೆ ಆಗಿದೆ ಎಂದರು.

ಸಿಎಂ ರೇಸ್‌ನಲ್ಲಿ ಕೆಲ ಜನ ಇದ್ದಾರಲ್ಲ, ಅವರನ್ನು ಪಕ್ಷ ಗುರುತಿಸಿದೆಯೇ ಎಂಬ ಪ್ರಶ್ನೆಗೆ, ಪಕ್ಷವು ಯಾರನ್ನೂ ಗುರುತಿಸಿಲ್ಲ. ಅವರೇ ಕೆಲವರು ತಮ್ಮನ್ನು ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದೇನೆ ಎಂದು ಹೇಳಿಕೊಳ್ಳುತ್ತಿರಬಹುದು. ಅದು ಅವರ ವೈಯಕ್ತಿಕ ವಿಚಾರ, ಯಾರಿಗೆ ಆಸೆ ಇರಲ್ಲ. ಹೇಳಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಜಿಲ್ಲಾ ವಕ್ತಾರ ರವಿ ನಾಯಕ ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *