Coronavirus: ಮೂರನೇ ಅಲೆ ಮಕ್ಕಳನ್ನು ಬಾಧಿಸದೇ ಇರಬಹುದು, ಅವರು ಸ್ಟ್ರಾಂಗ್ ಇದ್ದಾರೆ !
Coronavirus: ಕೊರೊನಾ ವೈರಸ್ ಹಾವಳಿಗೆ ಇದುವರಗೆ ಜಗತ್ತು ತತ್ತರಿಸಿದ್ದೇ ಒಂದು ತೂಕವಾದರೆ ಇನ್ನು ಮೂರನೇ ಅಲೆ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತದೆ ಎನ್ನುವ ಆತಂಕದ್ದೇ ಮತ್ತೊಂದು ತೂಕ. ಆದರೆ ಪೋಷಕರೆಲ್ಲಾ ಸಮಾಧಾನದ ನಿಟ್ಟುಸಿರು ಬಿಡುವಂಥಾ ಸುದ್ದಿಯೊಂದನ್ನು ತಜ್ಞರು ನೀಡಿದ್ದಾರೆ. ಮೂರನೇ ಅಲೆ ಅದೆಷ್ಟೇ ರಭಸವಾಗಿದ್ದರೂ ಮಕ್ಕಳನ್ನು ಅದು ಹೆಚ್ಚು ಬಾಧಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ದೆಹಲಿ ಏಮ್ಸ್ ಜಂಟಿಯಾಗಿ ಸಂಶೋಧನೆ ನಡೆಸಿದ್ದು ಸುಮಾರು 10 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ತಪಾಸಣೆ ಮಾಡಲಾಗಿದೆ.
ಮಕ್ಕಳಲ್ಲಿ ದೊಡ್ಡವರಿಗಿಂತ ಉತ್ತಮವಾದ ರೋಗನಿರೋಧಕ ಶಕ್ತಿ ಇರುವುದು ಕಂಡಿಬಂದಿದೆ. ಹಾಗಾಗಿ ಅವರನ್ನು ಸೋಂಕು ಬಾಧಿಸುವ ಅಪಾಯವೂ ಕಡಿಮೆ ಎಂದಿದೆ ತಜ್ಞರ ತಂಡ. ಅತೀ ಹೆಚ್ಚು ಜನಸಂದಣಿ ಇರುವ ದೆಹಲಿ ಕೆಲ ಪ್ರದೇಶಗಳನ್ನೂ ಸೇರಿದಂತೆ ಒಟ್ಟು 4 ರಾಜ್ಯಗಳಿಂದ ಮಾಹಿತಿ ಕಲೆಹಾಕಿ ಈ ಸರ್ವೆ ಮಾಡಲಾಗಿದೆ. ಈಗ ಬಂದಿರುವುದು ಮಧ್ಯಂತರ ವರದಿಯಾಗಿದೆ. ಇನ್ನೂ ಕೆಲ ದಿನಗಳಲ್ಲಿ ಸಂಪೂರ್ಣ ವರದಿ ಬರಲಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.
ಈ ವರದಿಯ ಆಧಾರದ ಮೇಲೆ ನಿಧಾನಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆಯೂ ಚಿಂತಿಸಬಹುದು ಎನ್ನಲಾಗಿದೆ. ಇನ್ನು ಈ ಸಂಶೋಧನೆಗೆ ನಗರ ಮತ್ತು ಗ್ರಾಮ ಎರಡೂ ಭಾಗಗಳಿಂದ ಸ್ಯಾಂಪಲ್ ಗಳನ್ನು ಪಡೆಯಲಾಗಿತ್ತು. ಹಾಗಾಗಿ ಇದು ನಾವು ಖಡಾಖಂಡಿತವಾಗಿ ನಂಬಬಹುದಾದ ಸಂಶೋಧನೆ ಎಂದು ತಜ್ಞರು ತಿಳಿಸಿದ್ದಾರೆ. ಇನ್ನೇನು ಒಂದೆರಡು ತಿಂಗಳೊಳಗೆ ಮೂರನೇ ಅಲೆ ಅಪ್ಪಳಿಸುವ ಅಪಾಯ ಇರುವುದರಿಂದ ಈ ಸಂಶೋಧನೆ ಬಹಳ ಮುಖ್ಯವಾಗಿದೆ.
ಈಗಾಗಲೇ ದೇಶದ ನಾನಾ ಕಡೆ ಲಾಕ್ ಡೌನ್ ತೆರವಾಗುತ್ತಾ ಇರುವುದರಿಂದ ಸೋಂಕು ಮತ್ತಷ್ಟು ಹರಡುವ ಅಪಾಯ ಇದ್ದೇ ಇದೆ. ಬೇರೆಲ್ಲಕ್ಕಿಂತ ಮಕ್ಕಳನ್ನು ಕೋವಿಡ್ ಬಾಧಿಸುತ್ತೆ ಎನ್ನುವ ವಿಚಾರ ತಿಳಿದಾಗಿನಿಂದ ಎಲ್ಲಾ ರಾಜ್ಯಗಳು ಮಕ್ಕಳ ಚಿಕಿತ್ಸೆಗೆ ಬೇಕಾದ ಸೌಕರ್ಯಗಳನ್ನು ರೆಡಿ ಇಟ್ಟುಕೊಳ್ಳುತ್ತಿವೆ. ಇನ್ನು ಡೆಲ್ಟಾ ಪ್ಲಸ್ ರೂಪಾಂತರಿ ಕೂಡಾ ಆ ವೇಳೆಗೆ ತನ್ನ ಆರ್ಭಟ ಹೆಚ್ಚಿಸುತ್ತದೆ ಎಂದು ತಿಳಿದ ಮೇಲೆ ಆತಂಕ ಹೆಚ್ಚೇ ಆಗಿತ್ತು. ಈಗ ಮಕ್ಕಳನ್ನು ಮೂರನೇ ಅಲೆ ಹೆಚ್ಚು ಬಾಧಿಸುವುದಿಲ್ಲ ಎಂದು ತಿಳಿದು ಪೋಷಕರಂತೂ ಸಮಾಧಾನಗೊಂಡಿದ್ದಾರೆ.