ಜಮ್ಮು ಮತ್ತು ಕಾಶ್ಮೀರದ ಸರ್ವಪಕ್ಷ ಸಭೆ: ಕುತೂಹಲ ಮೂಡಿಸಿದ ಪ್ರಧಾನಿ ಮೋದಿ ನಡೆ

ಹೈಲೈಟ್ಸ್‌:

  • ಜಮ್ಮು ಮತ್ತು ಕಾಶ್ಮೀರದ ಎಲ್ಲ ಪಕ್ಷಗಳ ಜತೆ ಗುರುವಾರ ಸಭೆ ಆಯೋಜನೆ
  • ಸಭೆಯ ದಿನಾಂಕ ತಾತ್ಕಾಲಿಕ, ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ
  • ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವ ಸಾಧ್ಯತೆ
  • ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಎರಡು ವರ್ಷಗಳಲ್ಲಿ ಮೊದಲ ಸಭೆ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 24ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿಸುವ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು 2019ರ ಆಗಸ್ಟ್‌ ತಿಂಗಳಲ್ಲಿ ರದ್ದುಗೊಳಿಸಿದ ಬಳಿಕ ಉಂಟಾಗಿರುವ ರಾಜಕೀಯ ಆಕ್ರೋಶಗಳನ್ನು ಅಂತ್ಯಗೊಳಿಸಲು ಪ್ರಧಾನಿಯ ಮೊದಲ ಮಹತ್ವದ ನಡೆ ಇದಾಗಿದೆ.

ಜೂನ್ 24ರ ಸಭೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕರು ತಿಳಿಸಿದ್ದಾರೆ. ಸದ್ಯಕ್ಕೆ ಈ ಸಭೆಯ ದಿನಾಂಕವನ್ನು ತಾತ್ಕಾಲಿಕವಾಗಿ ಪರಿಗಣಿಸಲಾಗಿದೆ. ಉಳಿದ ಸಂಗತಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿದ ನಂತರದ ನಿರ್ಬಂಧಗಳನ್ನು ಕ್ರಮೇಣವಾಗಿ ಸಡಿಲಗೊಳಿಸುತ್ತಿರುವ, ಅಂತರ್ಜಾಲ ಸೌಲಭ್ಯದ ನಿಯಂತ್ರಣ ಸಡಿಲಗೊಳಿಸಿರುವುದು ಹಾಗೂ ರಾಜಕೀಯ ಮುಖಂಡರ ಬಿಡುಗಡೆ ಪ್ರಕ್ರಿಯೆಗಳ ಬಳಿಕ ಈ ಭಾಗಗಳಲ್ಲಿನ ರಾಜಕೀಯ ಚಟುವಟಿಕೆಗಳನ್ನು ಸಕ್ರಿಯಗೊಳಿಸುವತ್ತ ಹೆಜ್ಜೆ ಇರಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿನ ಸ್ಥಿತಿಗತಿಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪರಾಮರ್ಶೆ ನಡೆಸಿದರು. ಇದು ರಾಜಕೀಯ ಚಟುವಟಿಕೆಗಳ ಸಂಭಾವ್ಯತೆ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಈ ಪರಾಮರ್ಶನ ಸಭೆಯಲ್ಲಿ ಭಾಗವಹಿಸಿದ್ದರು. ಈ ಭಾಗದಲ್ಲಿ ಕಡಿಮೆಯಾಗಿರುವ ಉಗ್ರರ ಚಟುವಟಿಕೆಗಳು, ಸ್ಥಳೀಯ ನೇಮಕಾತಿ ಹಾಗೂ ಒಳನುಸುಳುವಿಕೆಗಳ ಬಗ್ಗೆ ಚರ್ಚಿಸಲಾಗಿದೆ.

ಭದ್ರತಾ ಸ್ಥಿತಿಗತಿಗಳ ಸುಧಾರಣೆ ಹಾಗೂ ಕೇಂದ್ರ ಯೋಜನೆಗಳ ವಿಸ್ತರಣೆಯಾಗಿರುವುದನ್ನು ಅಮಿತ್ ಶಾ ತಿಳಿದುಕೊಂಡರು. ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್‌ಗಳ ಅನುಷ್ಠಾನ ಮತ್ತು ಇತರೆ ಕೈಗಾರಿಕಾ ಯೋಜನೆಗಳನ್ನು ಚುರುಕುಗೊಳಿಸುವ ಬಗ್ಗೆ ಒತ್ತು ನೀಡಿದರು ಎನ್ನಲಾಗಿದೆ.

ಈ ಭಾಗಗಳಲ್ಲಿ ರಾಜಕೀಯ ಕ್ರಮಗಳನ್ನು ತೆಗೆದುಕೊಳ್ಳಲು ಶಾಂತಿ ಮೂಡಿಸುವ ಅವಕಾಶಗಳನ್ನು ಹುಡುಕುವ ಸಲುವಾಗಿ ಕೇಂದ್ರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಆದರೆ ಈ ಸಭೆಯಲ್ಲಿ ರಾಜಕೀಯ ವಿಚಾರಗಳಿರುವುದನ್ನು ಸರಕಾರದ ಮೂಲಗಳು ತಳ್ಳಿಹಾಕಿವೆ. ಈ ಪ್ರದೇಶಗಳ ಅಭಿವೃದ್ಧಿ ಹಾಗೂ ಲಸಿಕೆ ಅಭಿಯಾನದ ಮೇಲೆ ಗಮನ ಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ನಡೆದ ಮತ್ತೊಂದು ಪ್ರತ್ಯೇಕ ಪರಾಮರ್ಶನಾ ಸಭೆಯಲ್ಲಿ, ಅಮಿತ್ ಶಾ, ಎನ್‌ಎಸ್‌ಎ ಅಜಿತ್ ದೋವಲ್, ಕೇಂದ್ರ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅರೆಸೇನಾ ಪಡೆಗಳು ಮತ್ತು ಡಿಜಿಪಿಗಳು ಹಾಜರಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ಮೇಲುಗೈ ಸಾಧಿಸಿರುವ ಕುರಿತು ಇದರಲ್ಲಿ ಚರ್ಚಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *