Karnataka Politics: ಯಡಿಯೂರಪ್ಪ ನಾಯಕತ್ವ ಬದಲಾವಣೆ ಚರ್ಚೆ; ಹೈಕಮಾಂಡ್​ಗೆ ಇಂದು ಅರುಣ್ ಸಿಂಗ್ ವರದಿ ನೀಡುವ ಸಾಧ್ಯತೆ

ನವದೆಹಲಿ, ಜೂ. 19: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರವೂ ಸೇರಿದಂತೆ ಬಿಜೆಪಿ ಬಿಕ್ಕಟ್ಟಿನ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಅವರಿಗೆ ಸಮಗ್ರವಾದ ವರದಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ವಿಚಾರವೂ ಸೇರಿದಂತೆ ರಾಜ್ಯ ಬಿಜೆಪಿಯಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದ್ದ ಭಿನ್ನಮತದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಉಸ್ತುವಾರಿ ಅರುಣ್ ಸಿಂಗ್ ಜೂನ್ 16ರಿಂದ 18ರವರೆಗೆ ಮೂರು ರಾಜ್ಯಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೋರ್ ಕಮಿಟಿ ಸದಸ್ಯರು, ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಎಲ್ಲರೊಂದಿಗೆ ಚರ್ಚೆ ನಡೆಸಿರುವ ಅರುಣ್ ಸಿಂಗ್ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಸಮಗ್ರವಾದ ವರದಿಯನ್ನು ಶನಿವಾರವೇ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಲಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದುಬಂದಿದೆ.

ಮೂರು ದಿನಗಳ ಕರ್ನಾಟಕ ಪ್ರವಾಸದ ವೇಳೆ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಅರುಣ್ ಸಿಂಗ್ ಅವರು ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ವಿಶೇಷ ಗಮನ‌ ಹರಿಸಿದ್ದಾರೆ. ಆ ಪೈಕಿ ಮೊದಲನೆಯದು ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡುವ ಅಗತ್ಯ ಇದೆಯೋ ಇಲ್ಲವೋ? ಎಂಬುದು. ಈ ಹಿನ್ನಲೆಯಲ್ಲಿ ನಾಯಕತ್ವ ಬದಲಿಸಿದರೆ ಮುಂದೆ ಅದು ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು? ಎಂಬುದಾಗಿ ಕೂಡ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಎರಡನೇ ವಿಷಯ ಒಂದೊಮ್ಮೆ ಯಡಿಯೂರಪ್ಪ ನಾಯಕತ್ವ ಬದಲಿಸುವುದಾದರೆ ಯಾರಿಗೆ ನಾಯಕತ್ವ ನೀಡಬಹುದು? ಯಾರಿಗೆ ಪರ್ಯಾಯ ನಾಯಕತ್ವ ನಿರ್ವಹಿಸುವ ಶಕ್ತಿ ಸಾಮರ್ಥ್ಯಗಳಿವೆ ಎಂಬ ಬಗ್ಗೆ ಕೂಡ ಅರುಣ್ ಸಿಂಗ್ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆಯೂ ಹೈಕಮಾಂಡಿಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.

ಕಡೆಯದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರೆಯಲಿ ಬಿಡಲಿ ಬಿಜೆಪಿಯನ್ನು 2023ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಹಾಗೂ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಬೇಕಿದೆ. ಈ ದೃಷ್ಟಿಯಿಂದ ಏನು ಮಾಡಬೇಕು? ಎಂಬ ಬಗ್ಗೆಯೂ ಜೆ.ಪಿ. ನಡ್ಡ ಅವರಗೆ ಸಮಗ್ರವಾದ ವರದಿ ಸಲ್ಲಿಕೆ ಮಾಡಲಾಗುತ್ತದೆ. ಬಳಿಕ ಜೆ.ಪಿ. ನಡ್ಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಅವರ ಬಳಿ ಚರ್ಚೆ ಮಾಡಿ ರಾಜ್ಯ ಬಿಜೆಪಿ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ ಎನ್ನಲಾಗಿದೆ

ಈ ಹಿನ್ನಲೆಯಲ್ಲಿ ಇಂದು ಅರುಣ್ ಸಿಂಗ್ ಅವರು ನೀಡುವ ವರದಿಯು ಸಿಎಂ ಯಡಿಯೂರಪ್ಪ ಅವರ ಅಧಿಕಾರಾವಧಿ ಮುಗಿಯುತ್ತದೆಯೋ ಮುಂದುವರೆಯುತ್ತದೆಯೋ ಎಂಬುದನ್ನು ನಿರ್ಧಾರ ಮಾಡಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *