ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರಸ್ ಮರು ಆಯ್ಕೆ

ಹೈಲೈಟ್ಸ್‌:

  • ವಿಶ್ವಸಂಸ್ಥೆಯ ನೂತನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗುಟೆರಸ್ ಮರು ಆಯ್ಕೆ
  • 2022ರ ಜನವರಿ 1ರಿಂದ ಎರಡನೆಯ ಅವಧಿ ಆರಂಭ
  • 1995 ರಿಂದ 2002ರವರೆಗೆ ಪೋರ್ಚುಗಲ್‌ನ ಪ್ರಧಾನಿಯಾಗಿದ್ದ ಗುಟೆರಸ್

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಮರು ಆಯ್ಕೆಯಾಗಿದ್ದಾರೆ. ಅವರು ಎರಡನೆಯ ಅವಧಿಗೆ ಮುಂದಿನ ಐದು ವರ್ಷಗಳ ಕಾಲ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

15 ಸದಸ್ಯ ದೇಶಗಳನ್ನು ಒಳಗೊಂಡಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಜೂನ್ 8ರಂದು ನಡೆದ ಗೋಪ್ಯ ಸಭೆಯ ಬಳಿಕ ಗುಟೆರಸ್ ಅವರನ್ನೇ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸುವ ಕುರಿತು 193 ಸದಸ್ಯ ದೇಶಗಳ ಸಾಮಾನ್ಯ ಸಭೆಗೆ ಶಿಫಾರಸು ಮಾಡಿತ್ತು. ಜೂನ್ ತಿಂಗಳ ಮಂಡಳಿ ಅಧ್ಯಕ್ಷರಾಗಿರುವ ವಿಶ್ವಸಂಸ್ಥೆಯ ಎಸ್ಟೋನಿಯಾದ ರಾಯಭಾರಿ ಸ್ವೆನ್ ಜುರ್ಗೆನ್ಸನ್ ಅವರು ಈ ಆಯ್ಕೆಯನ್ನು ಪ್ರಕಟಿಸಿದ್ದಾರೆ.

‘ನಮಗೆ ಒಬ್ಬರೇ ಅಧಿಕೃತ ಅಭ್ಯರ್ಥಿ ಇದ್ದರೂ, ಆಯ್ಕೆ ಪ್ರಕ್ರಿಯೆಯನ್ನು ಕಳೆದ ಬಾರಿಯಿಂದಲೂ ಬದಲಾಯಿಸಿಲ್ಲ. ನಾವು ಈಗ ಅದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ವರ್ಗಾಯಿಸಿದ್ದೇವೆ’ ಎಂದು ಜುರ್ಗೆನ್ಸನ್ ಹೇಳಿದ್ದರು. ಶುಕ್ರವಾರ ಸಾಮಾನ್ಯ ಸಭೆಯಲ್ಲಿ ಗುಟೆರಸ್ ಅವರನ್ನು ಆಯ್ಕೆ ಮಾಡಲಾಯಿತು.

‘ಬಲಿಷ್ಠ ಮತ್ತು ಸಣ್ಣ ದೇಶಗಳ ನಡುವೆ ಇರುವ ನಂಬಿಕೆಯನ್ನು ಖಾತರಿಪಡಿಸಿಕೊಳ್ಳಲು, ಸೇತುವೆ ನಿರ್ಮಿಸಲು ಮತ್ತು ಪರಸ್ಪರ ನಂಬಿಕೆಯನ್ನು ಬೆಳೆಸಲು ನಿರಂತರವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದು ಪ್ರಮಾಣವಚನ ಸ್ವೀಕಾರದ ಬಳಿಕ ಗುಟೆರಸ್ ಹೇಳಿದ್ದಾರೆ.

ಬಾನ್ ಕಿ ಮೂನ್ ಅಧಿಕಾರಾವಧಿ ಮುಗಿದ ಬಳಿಕ 2017ರ ಜನವರಿ 1ರಂದು ಗುಟೆರಸ್ ಅವರು ಒಂಬತ್ತನೇ ಪ್ರಧಾನ ಕಾರ್ಯದರ್ಶಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಮೊದಲ ಅಧಿಕಾರಾವಧಿಯು ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ. ಅವರ ಎರಡನೆಯ ಅವಧಿ 2022ರ ಜನವರಿ 1ರಿಂದ ಆರಂಭವಾಗಲಿದೆ.

72 ವರ್ಷದ ಗುಟೆರಸ್ ಅವರು 1995 ರಿಂದ 2002ರವರೆಗೆ ಪೋರ್ಚುಗಲ್‌ನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 2005-2015ರವರೆಗೆ ವಿಶ್ವಸಂಸ್ಥೆಯಲ್ಲಿ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *