ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಬದಲಾಯಿಸಿ, ಪಂಚಮಸಾಲಿ ಸಮಾಜಕ್ಕೆ ಸಿಎಂ ಹುದ್ದೆ ನೀಡುವಂತೆ ಮನವಿ ಕೋರಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿರವರು ಗುರುವಾರ ರಾತ್ರಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪಂಚಮಸಾಲಿ ಸಮಾಜಕ್ಕೆ ಸಿಎಂ ಅಧಿಕಾರವನ್ನು ನೀಡಬೇಕೆಂದು ಶ್ರೀಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ರವರ ವಿರುದ್ಧ ಪಕ್ಷದ ವಿರೋಧಿ ಶಾಸಕರ ಆರೋಪಗಳನ್ನು ಅರುಣ್ ಸಿಂಗ್ಗೆ ಶ್ರೀಗಳು ತಿಳಿಸಿದ್ದಾರೆ. ಆಡಳಿತ ದುರುಪಯೋಗವಾಗುತ್ತಿದೆ. ಈವರೆಗೂ ನಾಲ್ಕು ಬಾರಿ ರಾಜ್ಯದ ಜನ ಮುಖ್ಯಮಂತ್ರಿಯನ್ನಾಗಿ ಯಡಿಯೂರಪ್ಪರನ್ನು ಆಯ್ಕೆ ಮಾಡಿದ್ದರೂ, ಸಮಾಜದ ಋಣ ತೀರಿಸದೇ ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಶ್ರೀಗಳು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೀಸಲಾತಿಯ ಹೋರಾಟದಲ್ಲಿ ಸಿಎಂ ಪುತ್ರ ವಿಜಯೇಂದ್ರ ಮಾಡಿದ ಮೋಸ ರಾಜ್ಯದ ಜನ ಈವರೆಗೂ ಮರೆಯಲು ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ರವರನ್ನು ಅಧಿಕಾರದಿಂದ ಕೆಳಗಿಳಿಸಿ ಪಂಚಮಸಾಲಿ ಸಮಾಜದ ಮುಖಂಡರಿಗೆ ಅಧಿಕಾರವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.