Bangalore: ನೀರು ಮತ್ತು ವಿದ್ಯುತ್​ ಬಿಲ್​​ನಂತೆಯೇ ಇನ್ಮುಂದೆ ಕಸಕ್ಕೂ ಬಿಲ್ ಕಟ್ಟಬೇಕು​​; BBMP ಹೊಸ ಚಿಂತನೆ

ಬೆಂಗಳೂರು(ಜೂ.20): ಬಿಬಿಎಂಪಿ ನಗರದ ಕಸ ನಿರ್ವಹಣೆಯನ್ನು ಸರಿಪಡಿಸಲು ನಾನಾ ಕಸರತ್ತುಗಳನ್ನು ನಡೆಸಿದರೂ, ಹೊಸ ಟೆಂಡರ್ ಕರೆದರೂ, ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಾರದ ಕಾರಣ, ಇದನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಮಾಡಲು ಸರ್ಕಾರ ಪ್ರತ್ಯೇಕ ಕಂಪನಿಯೊಂದನ್ನು ರಚಿಸಿದೆ.  ಸರ್ಕಾರ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಲಿಮಿಟೆಡ್ ಹೊಸ ಕಂಪನಿ ಈಗಾಗಲೇ ರಚಿಸಿದೆ.

BESCOM, BWSSB ಮಾದರಿಯಲ್ಲೇ ಮತ್ತೊಂದು ಬೋರ್ಡ್ ನಿರ್ಮಾಣಕ್ಕೆ ನಿರ್ಧಾರ.!!

ನಗರದ ಪ್ರಮುಖ ಸಮಸ್ಯೆಗಳಲ್ಲೊಂದಾದ ವೇಸ್ಟ್ ಮ್ಯಾನೇಜ್ಮೆಂಟ್ ಪಾಲಿಕೆ ಪಾಲಿಗೆ ಸವಾಲಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಸಮರ್ಪಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಮಾಡಲು ಪಾಲಿಕೆಗೆ ಸಾಧ್ಯವಾಗಲಿಲ್ಲ. ಹೀಗಾಗಿ ತ್ಯಾಜ್ಯಗಳ ಸಮರ್ಪಕ ಮರುಬಳಕೆ ಹಾಗೂ ಸೂಕ್ತ ವಿಲೇವಾರಿ ಮಾಡುವ ಉದ್ದೇಶದಿಂದ ಇದಕ್ಕಂತಲೇ ಬೆಂಗಳೂರು ಸಾಲಿಡ್ ವೇಸ್ಡ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಎಂಬ ಹೊಸ ಕಂಪನಿಯನ್ನು ಸ್ಥಾಪಿಸಿದೆ. ಜುಲೈ 1 ರಿಂದಲೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಸ ನಿರ್ವಹಣೆ ಜವಾಬ್ದಾರಿ ಈ ಕಂಪನಿ ನೋಡಿಕೊಳ್ಳಲಿದೆ. ಬಿಬಿಎಂಪಿಯ ಬಹುದೊಡ್ಡ ಜವಾಬ್ದಾರಿ ಈ ಮೂಲಕ ಕಳಚಿಕೊಳ್ಳಲಿದೆ. ಈಗಾಗಲೇ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನ ನೀಡಿದ್ದು, ಅಧಿಕಾರಿಗಳು, ಸಿಬ್ಬಂದಿಗಳ ಪಟ್ಟಿ, ಒಪ್ಪಂದಗಳ ಪ್ರತಿಗಳು, ಗುತ್ತಿಗೆಗಳು, ಕೆಲಸ ಮಾಡುವ ಅಧಿಕಾರಿಗಳ ವಿವರ ಸೇರಿದಂತೆ ಘನ ತ್ಯಾಜ್ಯ ವಿಭಾಗದ ಕಡತಗಳು ಎಲ್ಲವೂ ಈ ಕಂಪೆನಿಗೆ ಕೊಡಲು ಬಿಬಿಎಂಪಿಗೆ ಸೂಚಿಸಿದ್ದಾರೆ. ಜುಲೈ ಒಂದರಿಂದ ಹೊಸ ಘನತ್ಯಾಜ್ಯ ಕಂಪನಿ ಕೆಲಸ ನಿರ್ವಹಿಸಲಿದೆ.

ಹೇಗಿರಲಿದೆ ನೂತನ ಘನ ತ್ಯಾಜ್ಯ ನಿರ್ವಹಣಾ ಕಂಪನಿಯ ಕಾರ್ಯವೈಖರಿ.!?

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಕಂಪನಿ ರಚನೆಯಾಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಇದರ ಸಹ ನಿರ್ದೇಶಕರಾಗಿರುತ್ತಾರೆ. ಬೋರ್ಡ್ ಆಫ್ ಡೈರೆಕ್ಟರ್ಸ್ ನಲ್ಲಿ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಸದಸ್ಯರಿರುತ್ತಾರೆ. ನಿರ್ದೇಶಕರು, ಸಹ ನಿರ್ದೇಶಕರು ಹಾಗೂ ಬೋರ್ಡ್ ಆಫ್ ಡೈರೆಕ್ಟರ್ಸ್ ಸೇರಿಕೊಂಡು‌ ಕಂಪೆನಿಗೆ CEO ಅನ್ನು ಆಯ್ಕೆ ಮಾಡಲಿದ್ದಾರೆ. IAS ಅಧಿಕಾರಿ ಅಥವಾ ಅನುಭವಿ ಉದ್ಯಮಿಯನ್ನು BSWMLಗೆ ಸಿಇಓ ಆಗಿ ನೇಮಕ ಸಾಧ್ಯತೆ ಇದೆ. ಆರಂಭದಲ್ಲಿ ಪಾಲಿಕೆ‌ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಸಿಬ್ಬಂದಿಗಳೇ ಇಲ್ಲಿನ ಸಿಬ್ಬಂದಿಗಳಾಗಿರಲಿದ್ದಾರೆ. ಬೋರ್ಡ್ ಸಂಪೂರ್ಣವಾಗಿ ರೂಪುಗೊಂಡ ಮೇಲೆ ಅದರ ಸಿಬ್ಬಂದಿಗಳ ಆಯ್ಕೆಯೆಲ್ಲಾ ಕಂಪೆನಿ ‌ಸಿಇಓ ಹಾಗೂ ಕಾರ್ಯಾಕಾರಣಿ ಮಂಡಳಿ ಹೆಗಲಿಗೆ ಬೀಳಲಿದೆ.ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಕಂಪನಿಯ ಕೆಲಸಗಳೇನೇನು.!?

ಪೌರಕಾರ್ಮಿಕರ ರಸ್ತೆ ಗುಡಿಸುವಿಕೆ ಮತ್ತು ಸಾರ್ವಜನಿಕ ಶೌಚಾಲಯದ ಕೆಲಸ, ಈ ಎರಡನ್ನು ಬಿಟ್ಟು ಎಲ್ಲಾ ಕೆಲಸಗಳನ್ನೂ ಕಂಪನಿ ನಿರ್ವಹಿಸಲಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ಕೆಲಸಗಳಾದ ಮನೆಮನೆ ಕಸ ಸಂಗ್ರಹ, ಸಾಗಾಣಿಕೆ, ಲ್ಯಾಂಡ್ ಫಿಲ್, ಘಟಕಗಳ ನಿರ್ವಹಣೆ, ಒಣಕಸ ಸಂಗ್ರಹ ಕೇಂದ್ರಗಳು, ಬಯೋಮೈನಿಂಗ್ ಸೇರಿದಂತೆ ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ, ಪ್ರಾಣಿ ತ್ಯಾಜ್ಯ, ಪ್ಲಾಸ್ಟಿಕ್ ಕಸದ ಸಂಪೂರ್ಣ ಜವಾಬ್ದಾರಿಯೂ ಈ ಕಂಪನಿಗಿರಲಿದೆ.

ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಬೆಂಗಳೂರಿಗರಿಗೆ ಲಾಭವೋ.. ನಷ್ಟವೋ..?

ಈ ಕಂಪನಿ ಸ್ಥಾಪನೆಯಾಗುವುದರಿಂದ ಬೆಂಗಳೂರು ಮಂದಿಯ ಜೇಬಿಗೆ ಕತ್ತರಿ ಬೀಳಲಿದೆ. ಇದು ಬೆಂಗಳೂರು ಜನರಿಗೆ ತೆರಿಗೆಯ ಹೊರೆ ಕೊಡಲಿದೆ. ಪ್ರತಿ ಮನೆಯಲ್ಲಿ ಉತ್ಪತಿಯಾಗುವ ತ್ಯಾಜ್ಯಗಳ ಅನುಸಾರ ಶುಲ್ಕ ಕಟ್ಟುವ ಪದ್ದತಿ ಈ ಮೂಲಕ ಜಾರಿಯಾಗಲಿದೆ. ವೇಸ್ಟ್ ಮ್ಯಾನೇಜ್ಮೆಂಟ್ ಬೈಲಾ ಪ್ರಕಾರ ಗ್ಯಾರ್ಬೇಜ್ ಸೆಸ್ ಇಳಿಸಿ ಬಳಕೆದಾರರ ಶುಲ್ಕ ವಿಧಿಸುವ ಅವಕಾಶ ಈ ಸಂಸ್ಥೆಗಿದೆ. ಕರೆಂಟ್ ಬಿಲ್, ವಾಟರ್ ಬಿಲ್ ಮಾದರಿಯಲ್ಲಿ ಜನರು ವೇಸ್ಟ್ ಬಿಲ್ ಬರಿಸಬೇಕು.‌

ಒಟ್ಟಾರೆಯಾಗಿ ಈ ಮೂಲಕ ಬಿಬಿಎಂಪಿಗೆ ಸವಾಲಾಗಿದ್ದ ವೇಸ್ಟ್ ಮ್ಯಾನೇಜ್ಮೆಂಟ್ ಹೊರೆ ಕಳಚಲಿದೆ. ವಾರ್ಷಿಕವಾಗಿ ಅಂದಾಜು 1200 ಕೋಟಿ‌ ವೆಚ್ಚ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಮೀಸಲಿಡಬೇಕಿತ್ತು. ಅದನ್ನೂ ಇನ್ಮುಂದೆ ಉಳಿಸಿಕೊಳ್ಳಬಹುದು.‌ ಆದರೆ ಕರೆಂಟ್ ಬಿಲ್, ವಾಟರ್ ಬಿಲ್‌ ಪಟ್ಟಿಗೆ ಇನ್ಮುಂದೆ ಜನರು ವೇಸ್ಟ್ ಬಿಲ್ ಕೂಡ ಪಾವತಿ ಮಾಡಬೇಕು. ಹೀಗೆ ಸರ್ಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ‌ ಜನರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *