ಕಡು ಕಷ್ಟದ ಟೈಮ್‌ನಲ್ಲಿ ಆರಂಭವಾದ ಹೊಸ ಧಾರಾವಾಹಿ ‘ಆಕಾಶ ದೀಪ’

ಹೈಲೈಟ್ಸ್‌:

  • ಜಯ್ ಡಿಸೋಜ ಅಭಿನಯದ ‘ಆಕಾಶದೀಪ’ ಧಾರಾವಾಹಿ ಆರಂಭವಾಗಲಿದೆ
  • ಕಣ್ಣು ಕಾಣದ ಹುಡುಗ ಆಕಾಶನ ಕಥೆಯೇ ‘ಆಕಾಶದೀಪ’
  • ಕಡು ಕಷ್ಟದ ಸಮಯದಲ್ಲಿಯೂ ಆರಂಭವಾದ ಹೊಸ ಸೀರಿಯಲ್ ಇದು
  • ಶೀರ್ಷಿಕೆ ಗೀತೆಯ ಮೂಲಕ ಗಮನಸೆಳೆದ ‘ಆಕಾಶ ದೀಪ’ ಧಾರಾವಾಹಿ

ಸ್ಟಾರ್‌ ಸುವರ್ಣ ವಾಹಿನಿಯು ಈಗಾಗಲೇ ವಿಭಿನ್ನ ಪ್ರಯೋಗಗಳೊಂದಿಗೆ ಬದಲಾವಣೆಯ ಬೆಳಕು ಚೆಲ್ಲುವ ದಿಟ್ಟ ಹುಡುಗಿಯರ ಕಥೆ ಹೇಳ್ತಾ ಕನ್ನಡ ಪ್ರೇಕ್ಷಕರ ಮನ ಗೆದ್ದಿದೆ. ‘ಇಂತಿ ನಿಮ್ಮ ಆಶಾ’, ‘ಮುದ್ದುಲಕ್ಷ್ಮೀ’, ‘ಸರಸು’, ‘ಮನಸೆಲ್ಲಾ ನೀನೆ’ ಧಾರಾವಾಹಿಗಳು ಮನೆಮಾತಾಗಿರುವ ಈ ಸಮಯದಲ್ಲೇ, ಇದೇ ಜೂನ್‌ 21 ಅಂದರೆ ಇಂದು ‘ಆಕಾಶದೀಪ’ ಎಂಬ ಹೊಚ್ಚಹೊಸ ಪ್ರೇಮಕಥೆಯೊಂದಿಗೆ ನೋಡುಗರ ಕಣ್ಮನ ಸೆಳೆಯಲು ಸಜ್ಜಾಗಿದೆ.

ಎಳೆ ಚಂದ್ರನಾ ಕಿರು ಪಾದಕೆ ಆಕಾಶವೇ ಭೂಮಿಕೆ ಎಂದು ಆರಂಭವಾಗುವ ‘ಆಕಾಶದೀಪ’ ಧಾರಾವಾಹಿಯ ಶೀರ್ಷಿಕೆ ಗೀತೆ ಇದೀಗ ಕೇಳುಗರ ಹೃದಯಕ್ಕೆ ಲಗ್ಗೆ ಇಟ್ಟಿದೆ. ಇದರಲ್ಲಿದೀಪಾ ಹಾಲಿನ ಡೈರಿ ಮಾಡಿ ತನ್ನ ಮನೆ ನಡೆಸುವ ಗುರಿ ಇರುವ ಹುಡುಗಿ. ದಯೆ, ವಿನಯ, ಮುಗ್ಧತೆ ದೀಪಾಳ ಆಭರಣಗಳು. ಅಪ್ಪನ ಮುದ್ದಿನ ಮಗಳಾದರೂ, ಚಿಕ್ಕಮ್ಮ ಮತ್ತು ಮಲಸೋದರಿಯ ಮುಷ್ಠಿಗೆ ಸಿಲುಕಿ ನರಳುವ ಆಕೆಯ ಬಾಳಿಗೆ ಅನಿರೀಕ್ಷಿತ ಬೆಳಕೊಂದು ಬರುತ್ತದೆ. ಅದೇ ಆಕಾಶ್‌ ಎಂಬ ಸುಂದರ ಸರದಾರ.

ಆಕಾಶನಿಗೆ ಹಣ, ಪ್ರೀತಿಸೋ ಪರಿವಾರ ಎಲ್ಲವೂ ಇದೆ, ಆದರೆ ಒಂದೇ ಕೊರತೆ. ಆತ ಕಣ್ಣು ಕಾಣದ ದೃಷ್ಟಿಹೀನ. ಆಕಾಶ್‌ ಯಾರಿಂದಲೂ ಅನುಕಂಪ ಬಯಸದೇ ಸ್ವಾವಲಂಬಿಯಾಗಿ ಬದುಕುವ ಹುಡುಗ. ಕಣ್ಣಿಲ್ಲದಿರುವ ಆಕಾಶ್‌ ಒಬ್ಬ ಫೋಟೋಗ್ರಾಫರ್‌ ಆಗಿರುತ್ತಾನೆ. ಇದು ಅವನ ವೈಶಿಷ್ಟತ್ರ್ಯ. ಇದು ಹೇಗೆ ಎಂಬ ಪ್ರಶ್ನೆಗೆ ‘ಆಕಾಶದೀಪ’ ಧಾರಾವಾಹಿಯು ಉತ್ತರ ಕೊಡಲಿದೆ.

ದೀಪಾ ತನ್ನ ಮನೆಯ ಜವಾಬ್ದಾರಿಯನ್ನು ಹೊತ್ತಿರುವ ಕಾರಣ ತನಗೆ ಮದುವೆಯೇ ಬೇಡ ಎಂದು ದೂರವಿದ್ದರೆ, ಆಕಾಶ್‌ ತನಗಿರುವ ಸಮಸ್ಯೆಯಿಂದ ಮದುವೆಯಿಂದ ದೂರ ಉಳಿದಿದ್ದಾನೆ. ಯೋಚನೆ ಮತ್ತು ಅಂತಸ್ತಲ್ಲಿಆಕಾಶ ಭೂಮಿಯಷ್ಟು ಅಂತರವಿರೋ ಇವರಿಬ್ಬರಿಗೆ ಪ್ರೀತಿ ಹುಟ್ಟೋದಾದ್ರೂ ಹೇಗೆ? ಇದೇ ವಿಧಿಯ ಆಟ. ದೀಪಾ ಕಟ್ಟಿರುವ ಆಕಳುಗಳ ಹಾಲು, ಆಕಾಶ್‌ನ ಸ್ವೀಟ್‌ ಅಂಗಡಿಗಳನ್ನು ಕಾಪಾಡುವ ಕ್ಷೀರಸಾಗರವೇ ಆಗಿರುತ್ತದೆ. ಈ ಒಂದು ಕೊಂಡಿಯು ಆಕಾಶ್‌ ಮತ್ತು ದೀಪಾ ಇಬ್ಬರನ್ನೂ ಎದುರು ನಿಲ್ಲಿಸುವ ಕಾರಣವಾಗುತ್ತದೆ.

ಆಕಾಶ್‌ನ ಅಂಧತ್ವವನ್ನು ಆಡಿಕೊಳ್ಳೋ ಜನರಿಗೆ ಸವಾಲು ಹಾಕೋ ಆಕಾಶ್‌ನ ತಾಯಿ ಹಠವಾದಿ ಇಂದ್ರಾಣಿ ತನ್ನ ಮಗನಿಗೆ ಸರ್ವಗುಣ ಸಂಪನ್ನಳಾದ ವಧು ತರುವ ನಿರ್ಧಾರ ಮಾಡುತ್ತಾಳೆ. ಇಂತಹ ದಿಗ್ಗಜೆಯ ಮುಂದೆ ಗುಬ್ಬಿಯಂತಹ ದೀಪಾ ಹೇಗೆ ಗೆಲ್ಲುತ್ತಾಳೆ ಎಂಬುದನ್ನು ಪ್ರತಿ ಕ್ಷಣ ಮನಸ್ಸಲ್ಲಿಕಾತುರ ಮೂಡಿಸುವ ಹಾಗೆ ‘ಆಕಾಶದೀಪ’ ಧಾರಾವಾಹಿ ಮೂಡಿಬರಲಿದೆ.

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *