ಅತಿ ಹೆಚ್ಚು ಮಕ್ಕಳನ್ನು ಹುಟ್ಟಿಸಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಸಚಿವ!
ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶದಲ್ಲಿ ತಮ್ಮ ದೇಶದ ಜನಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಅನುಮತಿ ನೀಡುವ ಮೂಲಕ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಭಾರತದ ಮಿಜೋರಾಂ ರಾಜ್ಯದ ಸಚಿವರೊಬ್ಬರು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾರು ಅತಿಹೆಚ್ಚು ಮಕ್ಕಳನ್ನು ಹೊಂದಿದ್ದಾರೋ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ!
ಮಿಜೋರಾಂ ರಾಜ್ಯದ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ತಮ್ಮ ಕ್ಷೇತ್ರದಲ್ಲಿ ಜನಸಂಖ್ಯೆ ಹೆಚ್ಚಿಸಲು ಸಹಾಯ ಮಾಡಿದವರಿಗೆ ಈ ರೀತಿಯ ಭಾರೀ ಆಫರ್ ನೀಡಿದ್ದಾರೆ. ಈಗಾಗಲೇ ಅತಿಹೆಚ್ಚು ಮಕ್ಕಳನ್ನು ಹೊಂದಿರುವ ಅಪ್ಪ-ಅಮ್ಮನಿಗೆ ಮಾತ್ರ ಈ ಆಫರ್ ಅನ್ವಯವಾಗಲಿದೆ. ಅತಿ ಕಡಿಮೆ ಜನಸಂಖ್ಯೆ ಇರುವ ತಮ್ಮ ಮಿಜೋ ಸಮುದಾಯದಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಕಾರಣಕ್ಕೆ ಈ ಯೋಚನೆ ಮಾಡಿದ್ದಾರೆ ಸಚಿವ ರಾಯ್ಟೆ.
ಹಾಗಂತ, ಸಚಿವ ರಾಯ್ಟೆ ತಮ್ಮ ಐಜ್ವಲ್ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಸಂಖ್ಯೆಗಿಂತ ಜಾಸ್ತಿ ಮಕ್ಕಳನ್ನು ಹೊಂದಿರುವವರಿಗೆ 1 ಲಕ್ಷ ರೂ. ಬಹುಮಾನ ನೀಡುತ್ತಾರೆಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಅತಿಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಎಂದು ಮಾತ್ರ ಹೇಳಿರುವುದರಿಂದ ಐಜ್ವಲ್ ಕ್ಷೇತ್ರದ ಜನರಿಗೆ ಗೊಂದಲ ಉಂಟಾಗಿದೆ.
ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಮಾತನಾಡುವ ವೇಳೆ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ನನ್ನ ಕ್ಷೇತ್ರದಲ್ಲಿ ಯಾರು ಅತಿ ಹೆಚ್ಚು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೋ ಆ ತಂದೆ ಅಥವಾ ತಾಯಿಗೆ ನಾನು 1 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಹೇಳಿದ್ದಾರೆ.
ಮಿಜೋರಾಂ ಸಚಿವ ರಾಯ್ಟೆ
ಮಿಜೋ ಸಮುದಾಯದಲ್ಲಿ ಮಕ್ಕಳ ಜನನದ ಪ್ರಮಾಣ ಕಡಿಮೆಯಾಗಿದೆ. ಇದರಿಂದ ನಮ್ಮ ಸಮುದಾಯಕ್ಕೆ ಎಲ್ಲೂ ಪ್ರಾಧಾನ್ಯತೆ ಸಿಗುತ್ತಿಲ್ಲ. ಜನಸಂಖ್ಯೆ ಹೆಚ್ಚಾಗಿದ್ದರೆ ರಾಜಕೀಯವಾಗಿಯೂ ಮಾನ್ಯತೆ ಸಿಗುತ್ತದೆ. ಮಿಜೋ ಸಮುದಾಯ ಅಭಿವೃದ್ಧಿಯಾಗದಿರಲು ಜನಸಂಖ್ಯೆಯೂ ಮುಖ್ಯ ಕಾರಣವಾಗಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಬಹುಮಾನ ನೀಡುತ್ತಿದ್ದೇನೆ ಎಂದು ಸಚಿವ ರಾಯ್ಟೆ ಹೇಳಿದ್ದಾರೆ.
ಅನೇಕ ಪಂಗಡದ ಮಿಜೋ ಬುಡಕಟ್ಟು ಸಮುದಾಯದವರು ವಾಸವಾಗಿರುವ ಮಿಜೋರಾಂನಲ್ಲಿ ಚರ್ಚ್ಗಳು, ಮಿಜೋ ಅಸೋಸಿಯೇಷನ್, ಧಾರ್ಮಿಕ ಸಮುದಾಯಗಳು ತಮ್ಮ ಜಾತಿಯಲ್ಲಿ ಜನಸಂಖ್ಯೆ ಹೆಚ್ಚಿಸುವ ಬಗ್ಗೆ ಉತ್ತೇಜನ ನೀಡಬೇಕು. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಸಚಿವ ರಾಯ್ಟೆ ಹೇಳಿದ್ದಾರೆ.
2011ರ ಜನಗಣತಿ ಪ್ರಕಾರ, ಮಿಜೋರಾಂನಲ್ಲಿ 10,91,014 ಜನಸಂಖ್ಯೆಯಿದೆ. ಭಾರತದಲ್ಲಿ ಅರುಣಾಚಲ ಪ್ರದೇಶವನ್ನು ಬಿಟ್ಟರೆ ಜನಸಂಖ್ಯೆಯ ಪ್ರಮಾಣದಲ್ಲಿ ಮಿಜೋರಾಂ ರಾಜ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆಯಿದೆ.