Corona 3rd Wave| ಕೊರೋನಾ ಮೂರನೇ ಅಲೆ ಆತಂಕದ ನಡುವೆಯೇ ಶಾಲೆಗಳ ಆರಂಭಕ್ಕೆ ಒಪ್ಪಿಗೆ ಕೊಡ್ತಾರಾ ಸಿಎಂ..?
ಬೆಂಗಳೂರು (ಜೂನ್ 22); ಕೊರೋನಾ ಮೊದಲ ಅಲೆ ಕರ್ನಾಟಕಕ್ಕೆ 2020 ಜನವರಿ ತಿಂಗಳಲ್ಲಿ ಅಪ್ಪಳಿಸಿತ್ತು. ಪರಿಣಾಮ ಕಳೆದ ಒಂದೂವರೆದಿಂದ ರಾಜ್ಯದಲ್ಲಿ ಮಕ್ಕಳ ಸುರಕ್ಷತೆಯ ಕಾರಣದಿಂದಾಗಿ ಶಾಲಾ ಕಾಲೇಜುಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಅಲ್ಲದೆ, ಪ್ರಥಮ ಪಿಯುಸಿವರೆಗಿನ ಎಲ್ಲಾ ಮಕ್ಕಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲಾಗಿತ್ತು. ಆದರೆ, ಪ್ರಸ್ತುತ ಕೊರೋನಾ ಎರಡನೇ ಅಲೆ ತಗ್ಗಿದೆ. ರಾಜ್ಯದಲ್ಲಿ ಹಂತಹಂತವಾಗಿ ಅನ್ಲಾಕ್ ಜಾರಿಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲಾ-ಕಾಲೇಜುಗಳನ್ನು ಮತ್ತೆ ಆರಂಭ ಮಾಡಬೇಕೆ? ಎಂದು ನಿರ್ಧರಿಸಲು ರಾಜ್ಯ ಸರ್ಕಾರ ಡಾ ದೇವಿ ಪ್ರಸಾದ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಆ ಸಮಿತಿ ಇಂದು ಮಧ್ಯಾಹ್ನ ತನ್ನ ಶಿಫಾರಸನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಲಿದ್ದು, ಈ ವರ್ಷವಾದರೂ ಶಾಲಾ-ಕಾಲೇಜುಗಳು ತೆರೆಯಲಿವೆಯೇ? ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಕೊರೋನಾ ಸಾಂಕ್ರಾಮಿಕದ ನಡುವೆ ಶಾಲಾ ಕಾಲೇಜುಗಳನ್ನು ತೆರೆದು ಶೈಕ್ಷಣಿಕ ವರ್ಷ ಆರಂಭಿಸುವ ಸಂಬಂಧ ಇಂದು ಮಧ್ಯಾಹ್ನ 12.15 ಕ್ಕೆ ಡಾ. ದೇವಿ ಪ್ರಸಾದ್ ನೇತೃತ್ವದ ಸಮಿತಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ. ನ್ಯೂಸ್18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ತಜ್ಞರ ಸಮಿತಿಯು ಶಾಲೆಗಳ ಪುನರಾರಂಭಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸತತ ಎರಡು ಅಥವಾ ಮೂರು ವರ್ಷ ಶಾಲೆ-ಕಾಲೇಜುಗಳು ಆರಂಭವಾಗದೆ ಇದ್ದರೆ, ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲಾಗಬಹುದಾದ ಪರಿಣಾಮವನ್ನು ಮನಗಂಡು ತಜ್ಞರ ಸಮಿತಿ ಶಾಲೆಗಳ ಆರಂಭಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಇಂದು ಶಾಲೆಗಳನ್ನು ತೆರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಲ್ಲದೆ, ತಜ್ಞರ ಸಮಿತಿಯು ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹಲವು ಸಲಹೆಗಳನ್ನೂ ಸಹ ಸರ್ಕಾರಕ್ಕೆ ನೀಡಿದೆ.
ಡಾ. ದೇವಿ ಪ್ರಸಾದ್ ನೇತೃತ್ವದ ತಜ್ಞರ ತಂಡ ಸರ್ಕಾರಕ್ಕೆ ಕೊಟ್ಟಿರುವ ಸಲಹೆಗಳು ಏನು…?
1) ಕೊರೋನಾ ಎರಡನೇ ಅಲೆ ತಗ್ಗುತ್ತಿದೆ ಈ ವೇಳೆ ಶಾಲೆ ಪ್ರಾರಂಭ ಮಾಡೋದು ಸೂಕ್ತ.
2) 2-3 ವರ್ಷ ಶಾಲೆಯಿಂದ ಮಕ್ಕಳು ಹೊರಗೆ ಉಳಿದ್ರೆ ಭಾರೀ ಸಮಸ್ಯೆ ಆಗುತ್ತೆ.
3) ಕೊರೊನಾ ಪರಿಸ್ಥಿತಿ ಅನುಗುಣವಾಗಿ ಶಾಲೆಗಳನ್ನ ಪ್ರಾರಂಭ ಮಾಡಿ.4) ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿರುವ ಜಿಲ್ಲೆಗಳಲ್ಲಿ ಮೊದಲು ಶಾಲೆ ಪ್ರಾರಂಭ ಮಾಡಿ.
5) ಬಳಿಕ ಸೋಂಕು ನಿಯಂತ್ರಣಕ್ಕೆ ಬರೋ ಜಿಲ್ಲೆಗಳಲ್ಲಿ ಶಾಲೆಗಳನ್ನ ಹಂತ ಹಂತವಾಗಿ ಪ್ರಾರಂಭ ಮಾಡಿ.
6) ಶಾಲೆಗಳನ್ನ ಪ್ರಾರಂಭ ಮಾಡಿ. ಒಂದು ವೇಳೆ ಸೋಂಕಿನ ಪ್ರಮಾಣ ಹೆಚ್ಚುವ ಲಕ್ಷಣ ಕಂಡು ಬಂದರೆ ತಕ್ಷಣ ಶಾಲೆಗಳನ್ನ ಕ್ಲೋಸ್ ಮಾಡಿ.
7) ಪ್ರತಿ ಮಗುವಿಗೂ 2 ಲಕ್ಷ ಆರೋಗ್ಯ ವಿಮೆ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು.