ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ, ಜುಲೈನಲ್ಲಿ ದರ ಏರಿಕೆ ನಿರೀಕ್ಷೆ
ಹೈಲೈಟ್ಸ್:
- ಶೀಘ್ರದಲ್ಲೇ ತನ್ನ ಕಾರುಗಳ ದರ ಏರಿಕೆ ಮಾಡುವುದಾಗಿ ತಿಳಿಸಿದ ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ
- ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತನ್ನ ಕಾರುಗಳ ದರ ಏರಿಕೆಯಾಗಲಿದೆ ಎಂದ ಸಂಸ್ಥೆ
- ಕಳೆದೊಂದು ವರ್ಷದಿಂದೀಚೆಗೆ ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆ
- ಆದ್ದರಿಂದ ಹೆಚ್ಚುವರಿ ವೆಚ್ಚವನ್ನು ದರ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯ ಎಂದ ಕಂಪನಿ
ಹೊಸದಿಲ್ಲಿ: ದೇಶದ ಅತಿ ದೊಡ್ಡ ಆಟೊಮೊಬೈಲ್ ಉತ್ಪಾದಕ ಮಾರುತಿ ಸುಜುಕಿ ಶೀಘ್ರದಲ್ಲೇ ತನ್ನ ಕಾರುಗಳ ದರ ಏರಿಕೆ ಮಾಡುವುದಾಗಿ ಸೋಮವಾರ ತಿಳಿಸಿದೆ. ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ, ಅಂದರೆ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತನ್ನ ಕಾರುಗಳ ದರ ಏರಿಕೆಯಾಗಲಿದೆ ಎಂದು ತಿಳಿಸಿದೆ.
ಕಳೆದೊಂದು ವರ್ಷದಿಂದೀಚೆಗೆ ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ. ಆದ್ದರಿಂದ ಹೆಚ್ಚುವರಿ ವೆಚ್ಚವನ್ನು ದರ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ.
ದರ ಏರಿಕೆಯ ಪ್ರಮಾಣವನ್ನು ಕಂಪನಿ ಬಹಿರಂಗಪಡಿಸಿಲ್ಲ. ನಾನಾ ಮಾದರಿಯ ಕಾರುಗಳ ದರ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಕಳೆದ ಏಪ್ರಿಲ್ 16ರಂದು ಮಾರುತಿ ಸುಜುಕಿ ದಿಲ್ಲಿಯಲ್ಲಿ ಕಾರುಗಳ ದರದಲ್ಲಿ ಶೇ.1.6ರಷ್ಟು ದರ ಏರಿಸಿತ್ತು. ಜನವರಿ 18ರಂದು ಆಯ್ದ ಮಾದರಿಗಳಲ್ಲಿ 34,000 ರೂ. ತನಕ ದರ ಹೆಚ್ಚಳ ಮಾಡಿತ್ತು.
ಮಾರುತಿ ಸುಜುಕಿಯ ಎಂಟ್ರಿ-ಲೆವೆಲ್ ಹ್ಯಾಚ್ ಬ್ಯಾಕ್ ವರ್ಗದ ಆಲ್ಟೊ, ಎಸ್-ಕ್ರಾಸ್ ಕಾರುಗಳ ದರಗಳು 2.99 ಲಕ್ಷ ರೂ.ಗಳಿಂದ 12.39 ಲಕ್ಷ ರೂ. ತನಕ ಇದೆ.
ಕೋವಿಡ್ ಎರಡನೇ ಅಲೆಯ ಹೊಡೆತದ ಪರಿಣಾಮ ಆಟೊ ಮೊಬೈಲ್ ವಲಯದಲ್ಲೂ ಕಳೆದ ಮೇನಲ್ಲಿ ವ್ಯಾಪಾರ ಕುಸಿದಿತ್ತು. ಉದ್ಯೋಗ ನಷ್ಟವಾಗಿತ್ತು. ಹಲವು ಕಂಪನಿಗಳು ಮೇನಲ್ಲಿ ಲಾಕ್ ಡೌನ್ ಪರಿಣಾಮ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆಟೊ ಮೊಬೈಲ್ ಬಿಡಿಭಾಗಗಳ ಉದ್ದಿಮೆಯೂ ಸೊರಗಿತ್ತು.