ಸಿಎಂ ಹುದ್ದೆ ಸಂಘರ್ಷ ಬೇಡ – ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಸುರ್ಜೇವಾಲಾ ತಾಕೀತು

ಹೈಲೈಟ್ಸ್‌:

  • ಮುಖ್ಯಮಂತ್ರಿ ಹುದ್ದೆ ಕುರಿತ ಸಂಘರ್ಷಕ್ಕೆ ಅಂತ್ಯ ಹಾಡಬೇಕು ಎಂದು ತಾಕೀತು ಮಾಡಿದ ರಣದೀಪ್‌ ಸುರ್ಜೇವಾಲ
  • ಸಿಎಂ ಹುದ್ದೆಗೂ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂಬ ಸಂದೇಶ ರವಾನಿಸಿದ ರಾಜ್ಯ ಉಸ್ತುವಾರಿ
  • ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಬೇಕೆಂದಿದ್ದ ಜಮೀರ್‌ ಅಹ್ಮದ್‌ ಖಾನ್‌, ರಾಘವೇಂದ್ರ ಹಿಟ್ನಾಳ್‌
  • ಸಿದ್ದರಾಮಯ್ಯ ಆಪ್ತ ವಲಯದ ಇನ್ನೂ ಕೆಲವರು ಇದಕ್ಕೆ ದನಿಗೂಡಿಸಿದ್ದರು
  • ಈ ಹಿನ್ನೆಲೆಯಲ್ಲಿ ಸಿಎಂ ಸಂಘರ್ಷ ಸಂಬಂಧ ಮಧ್ಯ ಪ್ರವೇಶ ಮಾಡಿದ ಹೈಕಮಾಂಡ್‌

ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಕುರಿತ ಸಂಘರ್ಷಕ್ಕೆ ಅಂತ್ಯ ಹಾಡಬೇಕು. ಪಕ್ಷದ ಸಂಘಟನೆಗೆ ಒತ್ತು ಕೊಡುವುದರ ಜತೆಗೆ ಬಿಜೆಪಿ ಸರಕಾರದ ಜನ ವಿರೋಧಿ ನೀತಿ ವಿರುದ್ಧ ಪ್ರಖರ ಹೋರಾಟ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ತಾಕೀತು ಮಾಡಿದ್ದಾರೆ.

ಪಕ್ಷದ ಪದಾಧಿಕಾರಿಗಳ ಪಟ್ಟಿ ಪುನರ್‌ರಚನೆ ಬಯಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ದಿಲ್ಲಿಗೆ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಹುದ್ದೆಗೂ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂಬ ಸಂದೇಶವನ್ನು ಸುರ್ಜೇವಾಲ ರವಾನಿಸಿದ್ದಾರೆ. ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಬೇಕೆಂದು ಶಾಸಕರಾದ ಜಮೀರ್‌ ಅಹ್ಮದ್‌ ಖಾನ್‌, ರಾಘವೇಂದ್ರ ಹಿಟ್ನಾಳ್‌ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಆಪ್ತ ವಲಯದ ಇನ್ನೂ ಕೆಲವರು ಇದಕ್ಕೆ ದನಿಗೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಮಧ್ಯ ಪ್ರವೇಶ ಮಾಡಿದೆ.

ಕಾಂಗ್ರೆಸ್‌ನಲ್ಲಿ ಸಂಘಟನಾತ್ಮಕವಾಗಿ ಈಗ ಸಾಕಷ್ಟು ಚಟುವಟಿಕೆ ನಡೆಯುತ್ತಿದೆ. ಕೋವಿಡ್‌ ನಿರ್ವಹಣೆಗಾಗಿ ಕೆಪಿಸಿಸಿಯಿಂದ ವಾರ್‌ ರೂಮ್‌ ವ್ಯವಸ್ಥೆ ಮಾಡಲಾಗಿದೆ. ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಲಾಗಿದೆ. ಈ ಎಲ್ಲ ಹೋರಾಟಗಳಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಜಂಟಿಯಾಗಿಯೇ ಪಾಲ್ಗೊಂಡಿದ್ದಾರೆ. ಆದರೆ, ಪಕ್ಷದ ವೇದಿಕೆಯಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡುವಾಗ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಬೇಕು ಎಂದು ಹಲವು ಬಾರಿ ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೂ ಜಮೀರ್‌ ತಮ್ಮ ನಾಯಕನ ಪರ ಬ್ಯಾಟಿಂಗ್‌ ಮುಂದುವರಿಸಿದ್ದರು.

ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಪಕ್ಷದ ಪೂಜೆ ಮಾಡಬೇಕು. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಡಬೇಕೆಂದು ಡಿಕೆಶಿ ಪ್ರತಿಪಾದಿಸುತ್ತಲೇ ಬಂದಿದ್ದರು. ಜಮೀರ್‌ ಅವರಿಗೂ ಇಂತಹ ಹೇಳಿಕೆ ನೀಡದಂತೆ ಸೂಚಿಸಿದ್ದರು. ಆದರೆ, ಜಮೀರ್‌ ಮಾತ್ರ ಜಗ್ಗಿರಲಿಲ್ಲ.

ಅರ್ಜುನನ ಲಕ್ಷ್ಯವಿರಲಿ

”ರಾಜ್ಯದಲ್ಲಿಬಿಜೆಪಿ ಸರಕಾರದ ಭ್ರಷ್ಟಾಚಾರ ನೋಡಿರುವ ಜನರು ನಿರಾಶರಾಗಿದ್ದಾರೆ. ಪರ್ಯಾಯವಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದಾರೆ. ಈ ಹೊತ್ತಿನಲ್ಲಿ ಪಕ್ಷದ ಸಂಘಟನೆ ಬಹಳ ಮುಖ್ಯ. ಆದರೆ, ಕೆಲವರು ನಾಯಕತ್ವದ ವಿಷಯದಲ್ಲಿ ಬಹಿರಂಗ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಪುನರಾವರ್ತನೆಯಾಗಬಾರದು. ನಾಯಕತ್ವದ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಶಾಸಕರ ಅಭಿಪ್ರಾಯ ಪಡೆಯಲಾಗುತ್ತದೆ. ಹಾಗಾಗಿ ಯಾರೂ ಕೂಡ ಇಂತಹ ಹೇಳಿಕೆ ನೀಡಕೂಡದು. ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹಾಭಾರತದ ಅರ್ಜುನನ ಲಕ್ಷ್ಯದ ರೀತಿಯಲ್ಲಿ ಕೆಲಸ ಮಾಡಬೇಕು,” ಎಂದು ಸುರ್ಜೇವಾಲಾ ಸೂಚಿಸಿದ್ದಾರೆ.

ಜಮೀರ್‌ಗೆ ಕರೆ ಮಾಡಿದ ಸುರ್ಜೇವಾಲ

ಈ ನಡುವೆ ಶಾಸಕ ಜಮೀರ್‌ ಅಹ್ಮದ್‌ಗೆ ಕರೆ ಮಾಡಿದ್ದ ರಣದೀಪ್‌ ಸಿಂಗ್‌ ಸುರ್ಜೇವಾಲ ”ನಾಯಕತ್ವದ ಬಗ್ಗೆ ಮತ್ತೆ ಹೇಳಿಕೆ ನೀಡಬಾರದು. ಪುನಃ ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು,” ಎಂದು ಸೂಚಿಸಿದ್ದಾರೆಂದು ಗೊತ್ತಾಗಿದೆ.

ಸಿದ್ದರಾಮಯ್ಯ ಮತ್ತೆ ಸಿಎಂ

ರಾಜ್ಯದ ಜನರ ಹಸಿವು ನೀಗಿಸಿದ ಸಿಎಂ ಸಿದ್ದರಾಮಯ್ಯ ಮುಂದಿನ ಬಾರಿಗೆ ಮತ್ತೆ ಸಿಎಂ ಆಗಲಿದ್ದಾರೆ. ಬಿಜೆಪಿ ಸರಕಾರ ಅನುದಾನ ಒದಗಿಸದೇ ಬರೀ ಜಗಳದಲ್ಲಿ ಕಾಲ ಕಳೆಯುತ್ತಿದೆ. 2023ರ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ
ಕೆ. ರಾಘವೇಂದ್ರ ಹಿಟ್ನಾಳ್‌ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *