ಬರಿ ವಿವಾದಗಳಲ್ಲೆ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅತ್ಯಾಚಾರ ಆರೋಪದ ಹಿನ್ನಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಡಿ ವಿಚಾರದ ಆರೋಪ ಇಂದಿಗೂ ಅಂತ್ಯವನ್ನು ಕಂಡಿಲ್ಲ, ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಸಾಹುಕಾರ್ ಸಚಿವ ಸಂಪುಟಕ್ಕೆ ಮರು ಸೇರ್ಪಡೆಯಾಗಲು ಒಂದಲ್ಲ ಒಂದು ಪ್ರಯತ್ನವನ್ನು ಮಾಡುತ್ತಿದ್ದಾರೆ.
ಈ ಹಿನ್ನಲೆ ಪಕ್ಷದ ನಾಯಕರ ಮೇಲೆ ಒತ್ತಡದ ತಂತ್ರವನ್ನೇರಲು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ ಆಪ್ತ ಸ್ನೇಹಿತ ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರು ಜಾರಕಿಹೊಳಿ ಪಕ್ಷವನ್ನು ತೊರೆಯುವುದಿಲ್ಲ. ಅವರಿಗೆ ಅಂತಹ ಆಲೋಚನೆಗಳೂ ಇಲ್ಲ.
ಶಾಸಕ ಸ್ಥಾನಕ್ಕೆ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆಂಬುದು ಸುಳ್ಳು ಸುದ್ದಿ. ಈ ಎಲ್ಲಾ ವರದಿಗಳು ಆಧಾರ ರಹಿತವಾದುದಾಗಿದೆ,ಶನಿವಾರ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಭೇಟಿಯ ವೇಳೆ ಜಾರಕಿಹೊಳಿ ಜೊತೆಗೆ ನಾನು ಸಹ ಇದ್ದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ, ಆದರೆ ನಾನು ಮುಂಬೈಗೆ ಹೋಗಿಯೇ ಇಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವವನ್ನು ನಾವು ಒಪ್ಪಿಕೊಂಡಿದ್ದೇವೆ. ಸರ್ಕಾರದ ಆಡಳಿತ ಪೂರ್ಣಗೊಳಿಸುವವರೆಗೂ ಅವರೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಹಾಗೂ ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸುತ್ತಿರುವ ಯಡಿಯೂರಪ್ಪರವರು ಕೊರೋನಾ ಸಾಂಕ್ರಾಮಿಕ ರೋಗವಿರಲಿ, ಪ್ರವಾಹ ಪರಿಸ್ಥಿತಿ ಅಥವಾ ಬರ ಪರಿಸ್ಥಿತಿಯೇ ಇರಲಿ ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದಾರೆಂದಿದ್ದಾರೆ. ಕುಮಟಳ್ಳಿ ಮುಖ್ಯಮಂತ್ರಿ ಯಡಿಯೂರಪ್ಪರವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.