ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರ ಉದ್ಘಾಟಣೆ : ಜಿಲ್ಲೆಯ ಜನರಿಗೆ ಗುಣಮಟ್ಟದ ಲಸಿಕೆ ಲಭಿಸುವಂತಾಗಲಿ: ಉಸ್ತುವಾರಿ ಸಚಿವ ಮುರುಗೇಶ ನಿರಾಣಿ
ಕಲಬುರಗಿ,ಜೂ.22(ಕ.ವಾ)- ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ ಅಧಿಕ ಪ್ರಮಾಣದಲ್ಲಿ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರ ನಿರ್ಮಾಣ ಮಾಡಲಾಗಿದ್ದು, ಇದರಿಂದ ಈ ಭಾಗದ ಜನರಿಗೆ ಸಕಾಲದಲ್ಲಿ ಗುಣಮಟ್ಟದ ಲಸಿಕೆ ದೊರೆಯಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಹೇಳಿದರು.
ಮಂಗಳವಾರ ನಗರದ ಹಳೇ ಡಿ.ಹೆಚ್.ಓ ಕಚೇರಿ ಹಿಂಭಾಗದಲ್ಲಿ 2020-21 ಸಾಲಿನ ಎನ್.ಹೆಚ್.ಎಮ್ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 62 ಲಕ್ಷ ರೂ.ಗಳ ವೆಚ್ಚದಲ್ಲಿ ಸಿದ್ದಗೊಂಡಿರುವ ಲಸಿಕಾ ಶೇಖರಣೆ ಕೇಂದ್ರವು ಪೋಲಿಯೋ, ಟಿ.ಟಿ, ಬಿ.ಸಿ.ಜಿ ಹಾಗೂ ಕೋವಿಡ್ ನಂತಹ ಸಾಂಕ್ರಾಮಿಕ ಸೋಂಕಿನ ರೋಗಗಳಿಗೆ ಲಸಿಕೆ ದಾಸ್ತಾನು ಮಾಡಿ, ಸರಬರಾಜು ಮಾಡಲು ಸಹಾಯಕವಾಗಲಿದೆ. ಈ ದಾಸ್ತಾನಿನಿಂದ ಪ್ರದೇಶದ 4 ಜಿಲ್ಲೆಗಳಿಗೆ ಉಪಯುಕ್ತ ಲಸಿಕೆ ಶೀಘ್ರದಲ್ಲಿ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ 13 ಲಕ್ಷ ಕೋವಿಶೀಲ್ಡ್ ಹಾಗೂ 63 ಸಾವಿರ ಕೊವ್ಯಾಕ್ಸಿನ್ ಲಸಿಕೆ ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಜನರಿಗೆ ಕೋವಿಡ್ ಲಸಿಕೆ ನೀಡಿ ಶೇ.100ರಷ್ಟು ಸಾಧನೆ ಮಾಡಬೇಕು. ಶೀಘ್ರದಲ್ಲಿ ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯನಿವಹಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪ್ರವಾಹ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನದಿಪಾತ್ರದ ಜನರಿಗೆ ಸ್ಥಳಾಂತರಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವಶ್ಯವಿದ್ದಲ್ಲಿ ಎನ್.ಡಿ.ಆರ್.ಎಫ್ ತಂಡ ಕಲಬುರಗಿಗೆ ಕರೆತರುವ ಕುರಿತು ಕೇಂದ್ರದೊಂದಿಗೂ ಮಾತುಕತೆ ನಡೆಸಲಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಹಿಂದೆಲ್ಲ ಸೂಕ್ತ ಲಸಿಕೆ ದೊರೆಯದ ಕಾರಣ ಜನರು ಅನೇಕ ತೊಂದರೆ ಅನುಭವಿಸಿದರು. ಆದರೆ ಇನ್ನು ಮುಂದೆ ಲಸಿಕೆಗೆ ಸಂಬಂಧಿಸಿದ ಯಾವುದೇ ತೊಂದರೆಯಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಲಸಿಕಾ ಉಗ್ರಾಣ ಕೇಂದ್ರ ಮಹತ್ವದ ಪಾತ್ರ ವಹಿಸಲಿದೆ ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರು ತಿಳಿಸಿದರು.
ಕೋವಿಡ್ ಎರಡನೇ ಅಲೆ ಆರಂಭದಲ್ಲಿ 3ನೇ ಸ್ಥಾನದಲ್ಲಿದ್ದ ಕಲಬುರಗಿ ಜಿಲ್ಲೆ ಇಂದು 30ನೇ ಸ್ಥಾನಕ್ಕೆ ಬಂದಿರುವುದು ಸಂತಸ ಸಂಗತಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಅನೇಕ ಅಧಿಕಾರಿ-ಸಿಬ್ಬಂದಿಗಳ ಶ್ರಮ ಇದೆ. ಜಿಲ್ಲೆಯಲ್ಲಿ ಸದ್ಯ ಆಕ್ಸಿಜನ್, ಬೆಡ್ ಹಾಗೂ ವ್ಯಾಕ್ಸಿನ್ ನಂತಹ ಯಾವುದೇ ಸಮಸ್ಯೆಗಳಿಲ್ಲ. ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ 38 ಸಾವಿರ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಮಾತನಾಡಿ, ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರಯತ್ನದಿಂದ ಕೇವಲ 6 ತಿಂಗಳ ಅವಧಿಯಲ್ಲಿ ಲಸಿಕಾ ಉಗ್ರಾಣ ಕಾಮಗಾರಿ ಪೂರ್ಣಗೊಂಡು ಸೇವೆಗೆ ಸಿದ್ದಗೊಂಡಿರುವುದು ಸಂತಸದ ವಿಚಾರ. ಕೋವಿಡ್ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ.ಯಿಂದ 20 ರಿಂದ 30 ಕೋಟಿ ರೂ. ಅನುದಾನ ಕಲಬುರಗಿ ಜಿಲ್ಲಾಡಳಿತಕ್ಕೆ ನೀಡಲಾಗಿದ್ದು, ಹೆಚ್ಚುವರಿಯಾಗಿ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಹ ಅನುಮೋದನೆ ನೀಡಲಾಗಿದೆ. ಜಿಲ್ಲಾಡಳಿತಕ್ಕೆ ಮಂಡಳಿಯಿಂದ ಅಗತ್ಯ ಸಹಕಾರ ನಿರಂತರ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ ಪಾಟೀಲ್, ಶಶೀಲ್ ಜಿ. ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ್, ಕಾಡಾ ಅಧ್ಯಕ್ಷ ಸಾಯಿಬಣ್ಣ ತಳವಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೌತಮ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ಅರೋಗ್ಯ ಇಲಾಖೆಯ ವಿಭಾಗೀಯ ಉಪನಿರ್ದೇಶಕ ಹಬೀಬ್ ಉಸ್ಮಾನ್ ಹಾಗೂ ಅರೋಗ್ಯ ಇಲಾಖೆಯ ಇನ್ನಿತರ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.