Morning Digest: ಬಿಗ್ ಬಾಸ್ ಮತ್ತೆ ಶುರು, ಚಿನ್ನ ದುಬಾರಿ, ಕರ್ನಾಟಕದಲ್ಲೂ ಡೆಲ್ಟಾ ಪ್ಲಸ್ ವೈರಸ್ ಪತ್ತೆ!; ಇಂದಿನ ಪ್ರಮುಖ ಸುದ್ದಿಗಳಿವು
ಕರ್ನಾಟಕದಲ್ಲಿ ತಗ್ಗಿದ ಮಳೆಯ ಆರ್ಭಟ:
ಕರಾವಳಿ ತೀರದ ಜಿಲ್ಲೆಗಳಲ್ಲಿ ಸುಮಾರು 10 ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿತ್ತು. ಇದೀಗ 2 ದಿನಗಳಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉತ್ತರ ಕರ್ನಾಟಕದ ಕೃಷ್ಣಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿ ನೀರಿನ ಹರಿವು ಹೆಚ್ಚಾಗಿ, ಪ್ರವಾಹ ಉಂಟಾಗುವ ಸಾಧ್ಯತೆಯಿದೆ.
ಇಂದು ಸಂಜೆಯಿಂದ ಬಿಗ್ ಬಾಸ್ ಮತ್ತೆ ಶುರು:
ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ ಇಂದು ಸಂಜೆ 6 ಗಂಟೆಯಿಂದ ಅದ್ದೂರಿಯಾಗಿ ಶುರುವಾಗಲಿದೆ. ಕ್ವಾರಂಟೈನ್ನಲ್ಲಿದ್ದ 12 ಸ್ಪರ್ಧಿಗಳು ಈಗಾಗಲೇ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯೇ ಬಿಗ್ ಬಾಸ್ ಮೊದಲ ಮಹಾ ಸಂಚಿಕೆಯ ಚಿತ್ರೀಕರಣ ನಡೆದಿದೆ. ಆ ದೃಶ್ಯಗಳನ್ನು ಕಲರ್ಸ್ ಕನ್ನಡ ಹಂಚಿಕೊಂಡಿತ್ತು. ಕೊರೋನಾದಿಂದ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ 8ನೇ ಸೀಸನ್ ಇಂದಿನಿಂದ ಮತ್ತೆ ಶುರುವಾಗಲಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ:
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ನಿನ್ನೆ 47,890 ರೂ. ಇದ್ದುದು 48,110 ರೂ.ಗೆ ಏರಿಕೆಯಾಗಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 43,900 ರೂ. ಇದ್ದುದು ಇಂದು 44,100 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ 200 ರೂ. ಏರಿಕೆಯಾಗಿದ್ದು, ಭಾರತದಲ್ಲಿ ಬೆಳ್ಳಿ ಬೆಲೆಯೂ ಸತತವಾಗಿ ಇಳಿಕೆ ಕಂಡಿತ್ತು. ಆದರೆ, ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿಗೆ 200 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿಗೆ 67,600 ರೂ. ಇದ್ದುದು 67,800 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 67,800 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 73,400 ರೂ. ಆಸುಪಾಸಿನಲ್ಲಿದೆ.
ರಾಜ್ಯಕ್ಕೂ ಡೆಲ್ಟಾ ಪ್ಲಸ್ ವೈರಸ್ ಎಂಟ್ರಿ:ಕರ್ನಾಟಕಕ್ಕೂ ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ವೈರಸ್ ಕಾಲಿಟ್ಟಿದೆ. ಇದರ ಜೊತೆಗೆ ನೆರೆಯ ರಾಜ್ಯಗಳಲ್ಲೂ ಹೊಸ ವೈರಸ್ ಪತ್ತೆಯಾಗುತ್ತಿರುವುದರಿಂದ ಸದ್ಯದಲ್ಲೇ ಭಾರತಕ್ಕೆ ಕೊರೋನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ದೇಶದಲ್ಲಿ 22 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 16 ಪ್ರಕರಣಗಳು ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶದಲ್ಲಿ ಕಂಡು ಬಂದಿದ್ದು, ಈ ಸಂಬಂಧ ಕೇಂದ್ರದ ಆರೋಗ್ಯ ಇಲಾಖೆ ಈ ಮೂರು ರಾಜ್ಯಗಳಿಗೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ. ಕೋವಿಡ್ ಸಾಂಕ್ರಾಮಿಕ ಡೆಲ್ಟಾ ರೂಪಾಂತರವು ‘ಡೆಲ್ಟಾ ಪ್ಲಸ್(Delta Plus) ಅಥವಾ ಎವೈ.1(AY.1) ರೂಪಾಂತರವಾಗಿ ಪರಿವರ್ತನೆಗೊಂಡಿದೆ. ಇದು ಬಹಳ ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಡೆಲ್ಟಾ ಪ್ಲಸ್ ಅಥವಾ ಬಿ.1.617.2.1(B.1.617.2.1) ರೂಪಾಂತರಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು ಇದು ಕೊರೋನಾ ಎರಡನೇ ಅಲೆಗೆ ಕಾರಣವಾಗಿತ್ತು. ಹೊಸ ರೂಪಾಂತರದಿಂದಾಗಿ (corona virus variant) ರೋಗದ ತೀವ್ರತೆಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿತ್ತು.
ಇನ್ನು, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಗೆ ಬ್ರೇಕ್ ಬಿದ್ದಿದ್ದು, ಇಂದು ಯಾವುದೇ ಏರಿಳಿತಗಳಾಗಿಲ್ಲ. ಇಂದಿನಿಂದ ಮತ್ತೆ 4 ಜಿಲ್ಲೆಗಳು ಅನ್ಲಾಕ್ ಆಗಿದ್ದು, ಕರ್ನಾಟಕದಲ್ಲಿ ಲಾಕ್ಡೌನ್ ಸಡಿಲಗೊಂಡ ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.