Corona Vaccine| ಕೊರೋನಾ ಲಸಿಕೆಯಿಂದ ಸ್ತ್ರೀ-ಪುರುಷರಲ್ಲಿ ಬಂಜೆತನ ಉಂಟಾಗುವುದಿಲ್ಲ; ಆರೋಗ್ಯ ಸಚಿವಾಲಯ ಸ್ಪಷ್ಟನೆ!

ನವ ದೆಹಲಿ; ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಮ್ಮ ಬಳಿ ಇರುವ ಏಕೈಕ ಅಸ್ತ್ರ ಲಸಿಕೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ ಆದೇಶದಂತೆ ದೇಶದಲ್ಲಿರುವ ಎಲ್ಲರಿಗೂ ಉಚಿತ ಲಸಿಕೆ ನೀಡಲು ಮುಂದಾಗಿದೆ. ಆದರೆ, ಕೊರೋನಾ ಲಸಿಕೆ ಸಂಶೋಧನೆಯಾದ  ದಿನದಿಂದಲೂ ಈ ಬಗ್ಗೆ ಒಂದಲ್ಲಾ ಒಂದು ಕಟ್ಟು ಕಥೆಗಳು ಮಿಥ್​ಗಳು ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಾಗುತ್ತಲೇ ಇವೆ. ಈ ಹಿಂದೆ ಎಳೆ ಕರುವಿನ ರಕ್ತದ ಕಣವನ್ನು ಕೊರೋನಾ ಲಸಿಕೆಯಲ್ಲಿ ಬಳಸಲಾಗಿದೆ ಎಂದು ಸುಳ್ಳು ಹರಡಲಾಗಿತ್ತು. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದಂತೆ, ಇದೀಗ ಕೊರೋನಾ ಲಸಿಕೆ ಪಡೆಯುವುದರಿಂದ ಸ್ತ್ರೀ ಮತ್ತು ಪುರುಷರಲ್ಲಿ ಬಂಜೆತನ ಉಂಟಾಗುವ ಸಾಧ್ಯತೆ ಇದೆ ಎಂಬ ವದಂತಿಯನ್ನು ಹರಡಲಾಗುತ್ತಿದೆ. ಆದರೆ, ಇದೂ ಸಹ ಸುಳ್ಳು ಎಂದು ಸಚಿವಾಲಯ ಈಗಾಗಲೇ ನಿರೂಪಿಸಿದೆ.

ಲಸಿಕೆಯಿಂದ ಸ್ತ್ರೀ-ಪುರುಷರಲ್ಲಿ ಬಂಜೆ ತನ ಉಂಟಾಗಬಹುದೇ? ಎಂದು “ನ್ಯಾಷನಲ್ ಎಕ್ಸ್‌ಪರ್ಟ್ ಗ್ರೂಪ್ ಫಾರ್ ಕೋವಿಡ್ -19″ ಸಂಶೋಧನೆ ನಡೆಸಿದ್ದು, ಈ ಸಂಶೋಧನೆಗಾಗಿ ಲಸಿಕೆ ಪಡೆದ ತಲಾ 45 ಜನ ಮಹಿಳೆಯರು ಮತ್ತು ಪುರುಷರನ್ನು (28 ವರ್ಷಕ್ಕೆ ಮೇಲ್ಪಟ) ಆಯ್ಕೆ ಮಾಡಲಾಗಿದೆ. ಫಿಜರ್ ಬಯೋಟೆಕ್ ಲಸಿಕೆ ಪಡೆದ ಇವರ ಆರೋಗ್ಯದ ಬಗ್ಗೆ ಕಳೆದ ಒಂದು ತಿಂಗಳಿಗಿಂತ ಹೆಚ್ಚಿನ ಕಾಲ ಗಮನವಹಿಸಲಾಗಿದೆ. ಆದರೆ, ಈ ವೇಳೆ ಲಸಿಕೆ ಪಡೆದವರಲ್ಲಿ ವೀರ್ಯದ ಪ್ರಮಾಣ, ವೀರ್ಯ ಸಾಂದ್ರತೆ, ವೀರ್ಯ ಚಲನಶೀಲತೆ ಮತ್ತು ಒಟ್ಟು ಮೋಟೈಲ್ ವೀರ್ಯಾಣುಗಳ ಸಂಖ್ಯೆ (ಟಿಎಂಎಸ್‌ಸಿ) ಸೇರಿದಂತೆ ಯಾವುದೇ ವೀರ್ಯ ನಿಯತಾಂಕಗಳಲ್ಲಿ ಕಡಿತವಾಗಿಲ್ಲ” ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

 

ಹೀಗಾಗಿ ಪುರುಷರು ಮತ್ತು ಹಸುಗೂಸಿಗೆ ಹಾಲುಣಿಸುವ ಮಹಿಳೆಯರೂ ಸಹ ಕೊರೋನಾ ಲಸಿಕೆ ಪಡೆಯಬಹುದು. ಇದರಲ್ಲಿ ಯಾವುದೇ ಅಪಾಯ ಇಲ್ಲ ಎಂದು “ನ್ಯಾಷನಲ್ ಎಕ್ಸ್‌ಪರ್ಟ್ ಗ್ರೂಪ್ ಫಾರ್ ಕೋವಿಡ್ -19” (ಎನ್‌ಇಜಿವಿಎಸಿ) ಶಿಫಾರಸು ಮಾಡಿದೆ.

ಈ ಶಿಫಾರಸಿನ ಬೆನ್ನಿಗೆ ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, “ಕೊರೋನಾ ಸೋಂಕಿನ ವಿರುದ್ದ ನೀಡುವ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಈ ಲಸಿಕೆಯಿಂದಾಗಿ ಸ್ತ್ರೀ-ಪುರುಷರಲ್ಲಿ ಬಂಜೆತನ ಉಂಟಾಗುತ್ತದೆ ಎಂದು ಹೇಳಲು ಯಾವುದೆ ವೈಜ್ಞಾನಿಕ ಆಧಾರವಿಲ್ಲ” ಎಂದು ಸ್ಪಷ್ಟಪಡಿಸಿದೆ.

ಪೊಲಿಯೊ, ದಡಾರ, ರುಬೆಲ್ಲಾ ಮೊದಲಾದ ಲಸಿಕಾ ಪ್ರಕ್ರಿಯೆಯ ಸಂದರ್ಭದಲ್ಲೂ ಅಂತಹ ಲಸಿಕೆಯ ವಿರುದ್ಧ ಅಪಪ್ರಚಾರಗಳು ನಡೆದಿದ್ದವು. ಆದರೆ, ಇದಕ್ಕೆ ಯಾವುದೇ ಆಧಾರಗಳಿಲ್ಲ. ಎಲ್ಲಾ ಲಸಿಕೆಗಳನ್ನು ಮೊದಲು ಪ್ರಾಣಿಗಳ ಮೇಲೆ ನಂತರ ಮನುಷ್ಯರ ಮೇಲೆ ಪ್ರಯೋಗಿಸಿಯೆ ಧೃಡೀಕರಿಸಲಾಗಿದೆ. ಲಸಿಕೆಗಳಲ್ಲಿ ಯಾವ ಅಡ್ಡ ಪರಿಣಾಮಗಳೂ ಇಲ್ಲವೆಂದು ಪ್ರಮಾಣಿಸಿದ ಮೇಲೆಯೆ ಲಸಿಕಾ ಪ್ರಕ್ರಿಯೆ ಆರಂಭಿಸಲಾಗಿದೆ. ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿದ ನಂತರವೇ ಬಳಕೆಗೆ ಅವಕಾಶ ನೀಡಲಾಗುತ್ತದೆ” ಎಂದು ಸಚಿವಾಲಯವು ಪ್ರಕಟಣೆಯಲ್ಲಿ ಒತ್ತಿ ಹೇಳಿದೆ.

“ಇದಲ್ಲದೆ ಕೊರೊನಾ ಲಸಿಕೆಯು ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು ಎಂದು ಸೂಚಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಕಂಡುಬಂದಿದೆ” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *