Indira Gandhi Biopic ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಕಿರಿಕ್ ಕ್ವೀನ್’ ಕಂಗನಾ ರಣಾವತ್!

ಹೈಲೈಟ್ಸ್‌:

  • ಬಾಲಿವುಡ್‌ನಲ್ಲಿ ‘ಕಿರಿಕ್ ಕ್ವೀನ್’ ಅಂತಲೇ ಫೇಮಸ್ ಆಗಿದ್ದಾರೆ ಕಂಗನಾ
  • ಹೊಸ ಸಿನಿಮಾ ಘೋಷಣೆ ಮಾಡಿರುವ ಕಂಗನಾ ರಣಾವತ್
  • ‘ಎಮರ್ಜೆನ್ಸಿ’ ಶೀರ್ಷಿಕೆಯ ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ

ನಟಿ ಕಂಗನಾ ರಣಾವತ್‌ ಅವರು ಬಾಲಿವುಡ್‌ನಲ್ಲಿ ಕಿರಿಕ್‌ಗಳಿಂದಲೇ ಫೇಮಸ್ ಆದವರು. ಪ್ರತಿದಿನ ಒಂದಿಲ್ಲೊಂದು ವಿವಾದಗಳಲ್ಲಿ ಕಂಗನಾ ಹೆಸರು ಕೇಳಿಬರುತ್ತಲೇ ಇರುತ್ತದೆ. ಜೊತೆಗೆ ಅವರು ಬಿಜೆಪಿ ಪಕ್ಷದೊಂದಿಗೂ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪರ ನಿಲುವುಗಳನ್ನು ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ, ಇದೀಗ ದಿಢೀರ್ ಅಂತ ಒಂದು ಸಿನಿಮಾ ಘೋಷಣೆ ಮಾಡಿದ್ದು, ಅದರಲ್ಲಿ ಅವರು ಮಾಜಿ ಪ್ರಧಾನಿ

ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಆ ಸಿನಿಮಾಕ್ಕೆ ‘ಎಮರ್ಜೆನ್ಸಿ‘ ಅಂತಲೂ ಟೈಟಲ್ ಫಿಕ್ಸ್ ಮಾಡಲಾಗಿದೆ.

ಮತ್ತೊಮ್ಮೆ ಡೈರೆಕ್ಟರ್ ಆದ ಕಂಗನಾ!
ಅಂದಹಾಗೆ, ‘ಎಮರ್ಜೆನ್ಸಿ’ ಸಿನಿಮಾಕ್ಕೆ ನಿರ್ದೇಶವನ್ನು ಕಂಗನಾ ಅವರೇ ಮಾಡಲಿದ್ದಾರೆ. ಈ ಹಿಂದೆ ‘ಮಣಿಕರ್ಣಿಕಾ’ ಸಿನಿಮಾಕ್ಕೆ ನಿರ್ದೇಶನ ಮಾಡಿದ ಅನುಭವ ಕಂಗನಾಗೆ ಇದೆ. ನಿರ್ದೇಶಕ ಕ್ರಿಷ್‌ ಅರ್ಧಕ್ಕೆ ಹೊರನಡೆದ ಪರಿಣಾಮ, ಆ ಸಿನಿಮಾವನ್ನು ನಿರ್ದೇಶಿಸುವ ಹೊಣೆ ಕಂಗನಾಗೆ ಬಂದಿತ್ತು. ಇದೀಗ ಅದೇ ಅನುಭವದ ಮೇಲೆ ‘ಎಮರ್ಜೆನ್ಸಿ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣವೂ ಅವರದ್ದೇ. ಮತ್ತೊಮ್ಮೆ ಅವರಿಗೆ ನೈಜ ಪಾತ್ರವನ್ನು ತೆರೆಮೇಲೆ ಅಭಿವ್ಯಕ್ತಿಸುವ ಚಾನ್ಸ್ ಸಿಕ್ಕಿದೆ.

‘ಎಮರ್ಜೆನ್ಸಿ’ಗಾಗಿ ತ್ಯಾಗ ಮಾಡಿದ ಕಂಗನಾ
ಈ ಹೊಸ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕಂಗನಾ, ‘ನನಗೆ ಇನ್ನೊಮ್ಮೆ ಡೈರೆಕ್ಟರ್ ಕ್ಯಾಪ್ ಧರಿಸಲು ಸಂತಸವಾಗುತ್ತಿದೆ. ಈ ಸಿನಿಮಾಗಾಗಿ ನಾನು 2 ವರ್ಷಕ್ಕೂ ಹೆಚ್ಚಿನ ಸಮಯವನ್ನು ನೀಡಿದ್ದೇನೆ. ಆ ಬಳಿಕ ನನಗೆ ಅನಿಸುತ್ತಿರುವುದೇನೆಂದರೆ, ಈ ಸಿನಿಮಾವನ್ನು ನನ್ನ ಹೊರತಾಗಿ ಬೇರೆ ಯಾರೂ ಕೂಡ ಉತ್ತಮವಾಗಿ ಡೈರೆಕ್ಟ್ ಮಾಡಲು ಸಾಧ್ಯವೇ ಇಲ್ಲ! ‘ಎಮರ್ಜೆನ್ಸಿ’ಗಾಗಿ ಕೆಲವು ಹೊಸ ಪ್ರಾಜೆಕ್ಟ್ಗಳನ್ನೇ ನಾನು ತ್ಯಾಗ ಮಾಡಬೇಕಾಗಿ ಬಂದಿದೆ. ಆದರೂ ಕೂಡ ನಾನು ‘ಎಮರ್ಜೆನ್ಸಿ’ ಸಿನಿಮಾ ಮಾಡುವುದಕ್ಕೆ ದೃಢ ನಿರ್ಧಾರ ಮಾಡಿದ್ದೇನೆ. ಈ ಚಿತ್ರದ ಬಗ್ಗೆ ತುಂಬ ಉತ್ಸುಕಳಾಗಿದ್ದೇನೆ ಮತ್ತು ಇದೊಂದು ಅತ್ಯದ್ಭುತ ಪಯಣವಾಗಿರಲಿದೆ’ ಎಂದು ಹೊಸ ಸಿನಿಮಾ ಬಗ್ಗೆ ಹೇಳಿದ್ದಾರೆ.

ಜಯಲಲಿತಾ ಬಯೋಪಿಕ್ ಮಾಡಿರುವ ಕಂಗನಾ
ಕಂಗನಾ ರಣಾವತ್ ಈಗಾಗಲೇ ಜಯಲಲಿತಾ ಬಯೋಪಿಕ್ ಮಾಡಿದ್ದಾರೆ. ‘ತಲೈವಿ’ ಹೆಸರಿನ ಆ ಸಿನಿಮಾದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಟ್ರೇಲರ್‌ನಿಂದಲೇ ಆ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಸಿನಿಮಾ ಬಿಡುಗಡೆಗೆ ಸಿನಿಪ್ರಿಯರು ಕಾತರದಿಂದ ಕಾದಿದ್ದಾರೆ. ಸದ್ಯ ‘ಎಮರ್ಜೆನ್ಸಿ’ ಸಿನಿಮಾ ಘೋಷಣೆ ಆಗಿರುವುದರಿಂದ, ಆ ಸಿನಿಮಾವನ್ನು ಕಂಗನಾ ಯಾವ ರೀತಿ ಮಾಡಬಹುದು ಕುತೂಹಲವಂತೂ ಎಲ್ಲರಿಗೂ ಇದ್ದೇ ಇದೆ.

ಇಂಡಿಯಾ ಹೆಸರು ಬದಲಾಯಿಸಿ ಎಂದಿರುವ ಕಂಗನಾ
ಇನ್ನು, ಈಚೆಗಷ್ಟೇ ಇಂಡಿಯಾ ಎಂಬುದನ್ನು ಬದಲಾಯಿಸಿ ಭಾರತ್‌ ಅನ್ನೋದನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದು ಕಂಗನಾ ಹೇಳಿದ್ದಾರೆ. ‘ಭಾರತವು ತನ್ನ ಪ್ರಾಚೀನ ಆಧ್ಯಾತ್ಮಿಕತೆ, ಜ್ಞಾನದಿಂದಾಗಿ ಮಾತ್ರ ಏಳಿಗೆ ಕಾಣಬಹುದು, ಅದು ನಮ್ಮ ಶ್ರೇಷ್ಠ ನಾಗರಿಕತೆಯ ಆತ್ಮ. ಪಾಶ್ಚಿಮಾತ್ಯ ನಾಗರಿಕತೆಯ ಪ್ರತಿಬಿಂಬ ಆಗದೆ ನಮ್ಮ ವೇದ, ಗೀತೆ, ಯೋಗಗಳಲ್ಲಿ ನಂಬಿಕೆ ಇಟ್ಟಾಗ ನಾವು ಅಭಿವೃದ್ಧಿ ಹೊಂದುತ್ತೇವೆ. ಗುಲಾಮರ ಹೆಸರಾಗಿರುವ ಇಂಡಿಯಾ ಬಿಟ್ಟು ಭಾರತ್ ಎಂದು ಹೆಸರು ಬದಲಾಯಿಸಬಹುದೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *