ದಿಲ್ಲಿಯಲ್ಲಿ ಅಗತ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಆಕ್ಸಿಜನ್‌ಗೆ ಬೇಡಿಕೆ: ವರದಿಯಿಂದ ಪೇಚಿಗೆ ಸಿಲುಕಿದ ಕೇಜ್ರಿವಾಲ್ ಸರಕಾರ
ಹೈಲೈಟ್ಸ್:
- ಸುಪ್ರೀಂಕೋರ್ಟ್ ನೇಮಿಸಿದ ಆಕ್ಸಿಜನ್ ಆಡಿಟ್ ಸಬ್ ಗ್ರೂಪ್ ವರದಿ ಸಲ್ಲಿಕೆ
- ವಾಸ್ತವ ಅಗತ್ಯಕ್ಕಿಂತಲೂ ನಾಲ್ಕು ಒಟ್ಟು ಅಧಿಕ ಆಕ್ಸಿಜನ್ ಬೇಡಿಕೆ ಇರಿಸಿದ್ದ ದಿಲ್ಲಿ
- ನಗರದ ಕೆಲವು ಆಸ್ಪತ್ರೆಗಳಿಂದ ಹಾಸಿಗೆ ಲಭ್ಯತೆ ಬಗ್ಗೆ ತಪ್ಪು ಮಾಹಿತಿ
- ದಿಲ್ಲಿಗೆ ಬೇಕಾಗಿದ್ದು ಸರಾಸರಿ 289 ಮೆ.ಟನ್, ಆದರೆ ಕೇಳಿದ್ದು 1,140 ಮೆ. ಟನ್
ಹೊಸದಿಲ್ಲಿ: ಕೋವಿಡ್ 19 ಎರಡನೆಯ ಅಲೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ದಿಲ್ಲಿ ಸರಕಾರವು ನಗರದ ಆಕ್ಸಿಜನ್ ಕೊರತೆಯನ್ನು ಅಗತ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಬೇಕಿದೆ ಎಂಬುದಾಗಿ ಉತ್ಪ್ರೇಕ್ಷೆ ಮಾಡಿತ್ತು ಸುಪ್ರೀಂಕೋರ್ಟ್‌ನ ಸಮಿತಿಯೊಂದು ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ.
ಪ್ರತಿ ಹಾಸಿಗೆಯ ಲೆಕ್ಕಾಚಾರದ ಸೂತ್ರದಲ್ಲಿ ದಿಲ್ಲಿಗೆ 289 ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರ ಅಗತ್ಯವಾಗಿತ್ತು. ಆದರೆ ಅದು 1,140 ಮೆಟ್ರಿಕ್ ಟನ್ ಅಂದರೆ, ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಕ್ಸಿಜನ್ ಬೇಕಾಗಿರುವುದಾಗಿ ಪ್ರತಿಪಾದಿಸಿತ್ತು ಎಂದು ಅದು ಹೇಳಿದೆ. ಕೋವಿಡ್ 19 ಎರಡನೆಯ ಅಲೆ ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದ ದಿಲ್ಲಿಯ ಅರವಿಂದ್ ಕೇಜ್ರಿವಾಲ್ ಸರಕಾರ ಈ ವರದಿಯಿಂದ ತೀವ್ರ ಪೇಚಿಗೆ ಸಿಲುಕಿದೆ.
ಏಪ್ರಿಲ್ 25 ರಿಂದ ಮೇ 10ರ ಅವಧಿಯಲ್ಲಿ ದಿಲ್ಲಿಯ ಸರಾಸರಿ ಆಕ್ಸಿಜನ್ ಬಳಕೆಯು 284 ಮೆಟ್ರಿಕ್ ಟನ್‌ನಿಂದ 372 ಮೆಟ್ರಿಕ್ ಟನ್ ನಡುವೆ ಇತ್ತು. ಈ ಸಮಯದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅನ್ನು ದಿಲ್ಲಿಗೆ ಪೂರೈಸಿದ್ದರಿಂದ ಅತ್ಯಧಿಕ ಪ್ರಕರಣಗಳ ಸಮಸ್ಯೆ ಎದುರಿಸುತ್ತಿದ್ದ 12 ಇತರೆ ರಾಜ್ಯಗಳಿಗೆ ಆಕ್ಸಿಜನ್ ಬಿಕ್ಕಟ್ಟು ಎದುರಾಗಿತ್ತು ಎಂದು ಸುಪ್ರೀಂಕೋರ್ಟ್ ನೇಮಿಸಿರುವ ಆಕ್ಸಿಜನ್ ಆಡಿಟ್ ಸಬ್ ಗ್ರೂಪ್ ವರದಿ ಹೇಳಿದೆ.
ಅತಿ ಕಡಿಮೆ ಹಾಸಿಗೆಗಳನ್ನು ಹೊಂದಿರುವ ದಿಲ್ಲಿಯ ನಾಲ್ಕು ಆಸ್ಪತ್ರೆಗಳಲ್ಲಿ ಅತ್ಯಧಿಕ ಆಕ್ಸಿಜನ್ ಬಳಕೆ ಮಾಡಿರುವುದಾಗಿ ಹೇಳಿಕೊಳ್ಳಲಾಗಿದೆ. ಸಿಂಘಾಲ್ ಆಸ್ಪತ್ರೆ, ಅರುಣಾ ಆಸಿಫ್ ಅಲಿ ಆಸ್ಪತ್ರೆ, ಎಸಿಕ್ ಮಾಡೆಲ್ ಆಸ್ಪತ್ರೆ ಮತ್ತು ಲೈಫ್‌ರೇ ಆಸ್ಪತ್ರೆಗಳಲ್ಲಿ ಕಡಿಮೆ ಹಾಸಿಗೆಗಳಿದ್ದು, ತಪ್ಪು ದಾಖಳೆಗಳನ್ನು ತೋರಿಸಿವೆ. ಇದರಿಂದ ದಿಲ್ಲಿಯಲ್ಲಿ ಆಕ್ಸಿಜನ್‌ಗೆ ಉತ್ಪ್ರೇಕ್ಷಿತ ಬೇಡಿಕೆ ಉಂಟಾಗಿದೆ ಎಂದು ವರದಿ ಆರೋಪಿಸಿದೆ.