ಕೋವಿಡ್ ಸಂಕಷ್ಟ, ಭ್ರಷ್ಟಾಚಾರ ಆರೋಪ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ಆಗ್ರಹ, ರಾಜ್ಯಪಾಲರಿಗೆ ಎಚ್‌ಡಿಕೆ ಪತ್ರ
ಹೈಲೈಟ್ಸ್:
- ಕೋವಿಡ್ ಸಂಕಷ್ಟ, ಭ್ರಷ್ಟಾಚಾರ ಆರೋಪ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ಆಗ್ರಹ
- ರಾಜ್ಯಪಾಲರು ಹಾಗೂ ವಿಧಾನಸಭೆಯ ಸ್ಪೀಕರ್ ಕಾಗೇರಿಗೆ ಮಾಜಿ ಸಿಎಂ ಎಚ್‌ಡಿಕೆ ಪತ್ರ
- ಪತ್ರದಲ್ಲಿ ಏನೆಲ್ಲಾ ಉಲ್ಲೇಖಿಸಿದ್ದಾರೆ ಎಂಬುವುದರ ಪೂರ್ಣ ವಿವರ ಇಲ್ಲಿದೆ
ಬೆಂಗಳೂರು: ರಾಜ್ಯದ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಇತ್ತೀಚಿನ ದಿನಗಳಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆಗಳ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ಮಾಜಿ ಸಿಎಂ
ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಎಚ್‌ಡಿಕೆ ಬರೆದಿರುವ ಪತ್ರದಲ್ಲಿ ಏನಿದೆ?
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅತ್ಯಂತ ಗಂಭೀರ ಪರಿಸ್ಥಿತಿಗೆ ತಲುಪಿದ್ದು, ಅದರ ನಿಯಂತ್ರಣಕ್ಕಾಗಿ ದೀರ್ಘ ಕಾಲದ ಲಾಕ್‌ಡೌನ್ ಜಾರಿ ಮಾಡಿದ್ದು ತಮಗೆ ಗೊತ್ತಿರುವ ವಿಚಾರವೇ, ಕೋವಿಡ್ ತಂದೊಡ್ಡಿದ ಸಂಕಷ್ಟದಿಂದಾಗಿ ಒಂದೆಡೆ ಜೀವ ಹಾನಿಯಾಗಿದ್ದರೆ, ಮತ್ತೊಂದು ಕಡೆ ಜನರ ಜೀವನಕ್ಕೂ ಹಾನಿಯಾಗಿದೆ. ಆದರೆ, ಜೀವ, ಜೀವನಕ್ಕಾದ ತೊಂದರೆಗೆ ಸರ್ಕಾರ ನೀಡಿದ ಪರಿಹಾರ ಸೂಕ್ತವಾದುದಲ್ಲ.
ಲಾಕ್‌ಡೌನ್‌ಗೆ ಪರಿಹಾರವಾಗಿ ಸರ್ಕಾರ ಘೋಷಿಸಿದ ಪ್ಯಾಕೇಜ್ ಅತ್ಯಂತ ಅಲ್ಪ ಪ್ರಮಾಣದ್ದು. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುವುದಕ್ಕೂ ಮೊದಲು ಸರ್ವ ಪಕ್ಷಗಳ ಅಭಿಪ್ರಾಯವನ್ನು ಒಮ್ಮೆ ಕೇಳಬೇಕಿತ್ತು. ರಾಜ್ಯದ 224 ಕ್ಷೇತ್ರಗಳ ಪ್ರತಿನಿಧಿಗಳ ಮಾತುಗಳನ್ನು ಕೇಳಬೇಕಿತ್ತು. ಆದರೆ, ಇದ್ಯಾವುದೂ ಆಗಿಲ್ಲ. ಅತ್ತ, ಕೋಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರದಲ್ಲಿ ಸರ್ಕಾರ ತಾರತಮ್ಯ ಮತ್ತು ಜಿಪುಣತೆಗಳನ್ನು ಪ್ರದರ್ಶಿಸಿದೆ. ಬಿಪಿಎಲ್ ಕಾರ್ಡುದಾರರಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ ಅದರಲ್ಲಿಯೂ ಎಲ್ಲರಿಗೂ ನೀಡದೇ ಮಾನದಂಡಗಳನ್ನು ವಿಧಿಸುತ್ತಿದೆ. ಇದರ ಜೊತೆಗೆ, ಬಡ ಮಧ್ಯಮ ವರ್ಗವೂ ಅಶಕ್ತ ಸಮುದಾಯವೇ, ಅವರಿಗೂ ಪರಿಹಾರ ನೀಡಬೇಕಿತ್ತು. ಪರಿಹಾರದ ಮೊತ್ತ ಹೆಚ್ಚಾಗಬೇಕಿತ್ತು.
ಸದ್ಯ ಮೂರನೇ ಅಲೆ ಬಾಗಿಲ ಬಳಿ ಬಂದು ನಿಂತಿದೆ. ಹಿಂದಿನ ವೈಫಲ್ಯಗಳು, ಮುಂದೆ ಆಗಬೇಕಾದ್ದನ್ನು ಸೂಕ್ತ ರೀತಿಯಿಂದ ಚರ್ಚಿಸಿಲು ಸಮರ್ಥವಾಗಿ ಮುಂದಡಿ ಇಡಲು ವಿಶೇಷ ಅಧಿವೇಶನ ಕರೆಯುವ ಅಗತ್ಯವಿದೆ. ಎಲ್ಲರ ಅಭಿಪ್ರಾಯವನ್ನು ಕೇಳಿ ಮುಂದುವರಿಯುವುದು ಪ್ರಜಾಸತ್ತಾತ್ಮಕ ಮಾರ್ಗವೂ ಹೌದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭ್ರಷ್ಟಾಚಾರದ ಆರೋಪ ತನಿಖೆಗೆ ಆದೇಶಿಸಲು ಆಗ್ರಹ
ರಾಜ್ಯ ಸರ್ಕಾರದ ಮೇಲೆ ಭಾರಿ ಪ್ರಮಾಣದ, ಗಂಭೀರವಾದ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ನೀರಾವರಿ ಇಲಾಖೆ ಯೋಜನೆಯ ರೂ.20,000 ಕೋಟಿ ಟೆಂಡರ್‌ನಲ್ಲಿ ಶೇ.10 ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆಡಳಿತ ಪಕ್ಷದ ಹಿರಿಯ ಶಾಸಕರೇ ಆರೋಪಿಸಿದ್ದಾರೆ. ಅಲ್ಲದೆ, ಇದರಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಇದರ ತನಿಖೆಗೆ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿರುವ ತಾವು ಇದರ ತನಿಖೆಗೆ ಆದೇಶಿಸಬೇಕು ಎಂದು ಎಚ್‌ಡಿಕೆ ಪತ್ರದ ಮೂಲಕ ಕೋರಿದ್ದಾರೆ.
ಅಬಕಾರಿ ಇಲಾಖೆಯ ಮಂತ್ರಿ ಪ್ರತಿ ಜಿಲ್ಲೆಯಿಂದಲೂ ಲಂಚದ ಹಣ ಅಪೇಕ್ಷಿಸುತ್ತಿರುವುದು, ಹಣ ಸಂಗ್ರಹ ಮಾಡದೇ ಹೋದರೆ ಅಧಿಕಾರಿಗಳು ಕೆಂಗಣ್ಣಿಗೆ ಗುರಿಯಾಗುವ ಅಪಾಯಗಳಿರುವುದರ ಬಗ್ಗೆ ಧ್ವನಿಮುದ್ರಿಕೆಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಸರ್ಕಾರ ತಾರತಮ್ಯ ಧೋರಣೆಯಿಂದ ನಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಬಕಾರಿ ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ಅಮಾನತು ಮಾಡಿತು. ಆದರೆ, ಮಂತ್ರಿ ಮತ್ತು ಉನ್ನತ ಅಧಿಕಾರಿಗಳನ್ನು ಸರ್ಕಾರ ರಕ್ಷಣೆ ಮಾಡಿಕೊಂಡಿದೆ. ಸರ್ಕಾರ ಒಂದೆಡೆ ಭ್ರಷ್ಟಾಚಾರ ಮಾಡುತ್ತಿದ್ದರೆ, ಮತ್ತೊಂದೆಡೆ ಸ್ವಜನ ಪಕ್ಷಪಾತ ಮಾಡುತ್ತಿದೆ.
ಲಂಚದ ಆರೋಪದ ಮೇಲೆ ಈ ಇಲಾಖೆಯ ಹಿಂದಿನ ಮಂತ್ರಿಯಿಂದ ಸರ್ಕಾರ ರಾಜೀನಾಮೆ ಪಡೆದಿತ್ತು. ಆದರೆ, ಈಗಿನ ಮಂತ್ರಿಯನ್ನು ರಕ್ಷಣೆ ಮಾಡಿಕೊಳ್ಳುತ್ತಿದೆ. ಇದರ ತನಿಖೆ ಅಗತ್ಯವಿದೆ. ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವ ಈ ಬೆಳವಣಿಗೆಗಳ ಕುರಿತು ಸದನದಲ್ಲಿ ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂದು ಉಲ್ಲೇಖಿಸಿದ್ದಾರೆ.
ಕನ್ನಡ, ಕರ್ನಾಟಕ, ಕನ್ನಡಿಗರಿಗೆ ಅನ್ಯಾಯ
ಇತ್ತೀಚಿನ ದಿನಗಳಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರಿಗೆ ಹಿನ್ನಡೆಗಳಾಗುತ್ತಿವೆ. ನಾವು ಹೋರಾಡುತ್ತಿರುವುದು, ರಾಜಕಾರಣ ಮಾಡುತ್ತಿರುವುದು, ಸರ್ಕಾರ ಮಾಡಬೇಕೆಂದಿರುವುದು ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ, ಕನ್ನಡಿಗರಿಗಾಗಿ, ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚು ಪೆಟ್ಟು ಬೀಳುತ್ತಿದೆ ಎಂಬ ವಿಚಾರವನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ವಿಶೇಷ ಅಧಿವೇಶನವನ್ನು ಕರೆಯುವಂತೆ ಆಗ್ರಹಿಸಿದ್ದಾರೆ.