H vishwanath| ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯಗಿಂತ ಡಿಕೆ. ಶಿವಕುಮಾರ್, ಪರಮೇಶ್ವರ್ ಸಿಎಂ ಆಗಲಿ; ಹೆಚ್. ವಿಶ್ವನಾಥ್
ಬೆಂಗಳೂರು (ಜೂನ್ 25); ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ, ಅಷ್ಟರಲ್ಲಾಗಲೆ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಸಿಎಂ ಯಾರು? ಎಂಬ ಕುರಿತ ಚರ್ಚೆಗಳು ಗರಿಗೆದರಿವೆ. ಸಿದ್ದರಾಮಯ್ಯನವರೇ ಮತ್ತೆ ಸಿಎಂ ಆಗಬೇಕು ಎಂದು ಅಖಂಡ ಶ್ರೀನಿವಾಸ್, ಜಮೀರ್ ಅಹಮದ್ ನಂತರ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಲ್ಲಿ ಈ ಬಗ್ಗೆ ದೂರು ನೀಡಿ ಬಂದಿದ್ದಾರೆ. ಆದರೆ, ಇಂದು ಈ ಬಗ್ಗೆ ಖಾರವಾಗಿಯೇ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, “ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯನವರನ್ನು ಸಿಎಂ ಮಾಡುವುದ ಕ್ಕಿಂತ ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರಿದ್ದಾರೆ” ಎಂದು ಕಿವಿಮಾತು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಹೆಚ್. ವಿಶ್ವನಾಥ್, “ಸಿದ್ದರಾಮಯ್ಯ ಶಿಷ್ಯಂದಿರು ಎಲ್ಲವನ್ನೂ ಮಾತಾಡ್ತಾರೆ, ಶಿಷ್ಯಂದಿರು 150 ಸೀಟು ಬರತ್ತೆ ಅಂತಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆದಾಗಲೇ ಯಾಕೆ ಈ ಸಂಖ್ಯೆ 70 ಕ್ಕೆ ಬಂದು ನಿಂತಿದ್ದು ಏಕೆ?” ಎಂದು ಅಪಹಾಸ್ಯ ಮಾಡಿದ್ದಾರೆ. ಅಲ್ಲದೆ, “ಸಿದ್ದರಾಮಯ್ಯ ಗೆ ಕ್ಷೇತ್ರವೇ ಇಲ್ಲ. ಒಬ್ಬ ಮಾಜಿ ಸಿಎಂ ಆದವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಮಾಜಿ ಸಿಎಂ ಗೆ ಇಂಥ ಪರಿಸ್ಥಿತಿ ಬರಬಾರದು. ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ ಸಿದ್ದರಾಮಯ್ಯ ನವರೇ, ನಿಮಗೆ ಒಳ್ಳೆದಾಗಲ್ಲ” ಎಂದಿದ್ದಾರೆ.
“ಸಿಎಂ ಸ್ಥಾನ ಪತ್ರಾವಳಿ ಅಲ್ಲ, ಸಿಎಂ ಸ್ಥಾನ ಉಂಡು ಬಿಸಾಡೋದಲ್ಲ. ಅದನ್ನು ಸ್ವಚ್ಚವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ಕೊಡಬೇಕು. ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ನಲ್ಲಿ ಸಿಎಂ ಅವಕಾಶ ಕೊಟ್ಟಾಗಿದೆ. ಡಿ.ಕೆ. ಶಿವಕುಮಾರ್ ಅದೇ ಪಕ್ಷದಲ್ಲಿ ಇದ್ದವರು, ಅವರಿಗೆ ಸಿಎಂ ಆಗುವ ಅವಕಾಶ ಸಿಗಬೇಕು. ಒಂದ್ಸಲ ಸಿದ್ದರಾಮಯ್ಯ ಗೆ ಅವಕಾಶ ಸಿಕ್ಕಾಗಿದೆ. ಈಗ ಮಲ್ಲಿಕಾರ್ಜುನ ಖರ್ಗೆ ಇದಾರೆ, ಪರಮೇಶ್ವರ್ ಇದಾರೆ. ಅವರಿಗೆ ಸಿಎಂ ಸ್ಥಾನ ನೀಡಿ” ಎಂದು ಹೆಚ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಸಿಲುಕಿದ್ದು ದುರಾದೃಷ್ಟಕರ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಸಿಲುಕಿದ್ದಾರೆ. ಅವರು ಸಿಡಿ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು ದುರಾದೃಷ್ಟ. ಅವರೇ ಸಿಕ್ಕಿಹಾಕಿಕೊಂಡ್ರೋ ಅಥವಾ ಬೇರೆಯವರು ಸಿಕ್ಕಿಹಾಕ್ಸಿದ್ರೋ ಗೊತ್ತಿಲ್ಲ. ಆದರೆ ಅವರ ರಾಜಕೀಯ ನಿರ್ಧಾರದಲ್ಲಿ ಕಾನೂನು ವಿಚಾರದಲ್ಲಿ ಎಲ್ಲರೂ ಮಾತನಾಡುವುದಕ್ಕೆ ಆಗುವುದಿಲ್ಲ.
ಈ ನಡುವೆ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದಾರೆ. ಪ್ರಕರಣದ ಬಗ್ಗೆ ಬಿಜೆಪಿ ಹೈಕಮಾಂಡ್ ಮುಂದೆ ನಮ್ಮ ಎಲ್ಲ ವಿಚಾರ ಹೇಳಲಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಅಥವಾ ನೀಡದೆ ಇರುವ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು. ಈ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ” ಎಂದು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.