Karnataka Weather Today: ಜೂ. 30ರವರೆಗೆ ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ

ಬೆಂಗಳೂರು (ಜೂನ್ 26): ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿ 25 ದಿನಗಳು ಕಳೆದಿವೆ. ಈ ನಡುವೆ ಹತ್ತು ದಿನಗಳ ಕಾಲ ಒಂದೇ ಸಮನೆ ಸುರಿದಿದ್ದ ಮಳೆರಾಯ ಕಳೆದೊಂದು ವಾರದಿಂದ ಕೊಂಚ ತಣ್ಣಗಾಗಿದ್ದಾನೆ. ಆದರೆ, ಇಂದಿನಿಂದ ಮತ್ತೆ ಮಳೆಯ ಆರ್ಭಟ ಶುರುವಾಗಲಿದ್ದು, ನಾಳೆಯಿಂದ 3 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ನಾಳೆಯಿಂದ ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

ಇಂದು ಕರಾವಳಿ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗಲಿದ್ದು, ನಾಳೆಯಿಂದ ಅಂದರೆ ಜೂನ್ 27ರಿಂದ ರಾಜ್ಯಾದ್ಯಂತ ಬಹುತೇಕ ಪ್ರದೇಶಗಳಲ್ಲಿ ವರುಣನ ಆರ್ಭಟ ಹೆಚ್ಚಲಿದೆ. ಜೂನ್ 30ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿಯೂ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಇಂದಿನಿಂದ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ವಲಯದ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೂಡ ಇಂದು ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ನೆರೆಯ ರಾಜ್ಯಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕರ್ನಾಟಕದಲ್ಲೂ ಮತ್ತೊಂದು ಹಂತದ ಮಳೆ ಮತ್ತೆ ಶುರುವಾಗುವ ನಿರೀಕ್ಷೆಯಿದೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ಆದರೆ, ಕರಾವಳಿಯಲ್ಲಿ ಇಂದು ಮಳೆಯ ಅಬ್ಬರ ಹೆಚ್ಚಾಗಲಿದೆ. ಜೂನ್ 27ರಿಂದ 29ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನಿನ್ನೆ ಕೂಡ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಬೆಳಗ್ಗೆಯಿಂದಲೇ ಮಳೆ ಸುರಿಯಲಿದೆ.

ಜೂನ್ 28ರಿಂದ 2 ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಜೂನ್ 28ರವರೆಗೆ ಸಾಧಾರಣ ಮಳೆಯಾಗಲಿದೆ. ಗುರುಗು ಸಹಿತ ಭಾರೀ ಮಳೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಜೂನ್ 27ರಿಂದ 30ರವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕ ಮಾತ್ರವಲ್ಲದೆ, ಒಡಿಶಾ, ಭುವನೇಶ್ವರದಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಭುವನೇಶ್ವರದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ. ಅನೇಕ ಕಡೆ ರಸ್ತೆಗಳು ಬಂದ್ ಆಗಿದ್ದು, ನದಿ ತೀರದ ಗ್ರಾಮಗಳಿಗೂ ನೀರು ನುಗ್ಗಿದೆ. ಇಷ್ಟೇ ಅಲ್ಲದೆ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್ ರಾಜ್ಯಗಳಲ್ಲೂ ಸಾಧಾರಣ ಮಳೆಯಾಗಲಿದೆ. ಹಾಗೇ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್ನಲ್ಲೂ ಇನ್ನು 3 ದಿನ ಮಳೆಯ ಅಬ್ಬರವಿರಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *