ದಾಖಲೆ ವೇಗದಲ್ಲಿ ಕೋವಿಡ್ ಲಸಿಕಾ ಅಭಿಯಾನ; ಒಂದೇ ವಾರದಲ್ಲಿ 4 ಕೋಟಿ ಡೋಸ್
ನವದೆಹಲಿ(ಜೂನ್ 26): ಭಾರತದಲ್ಲಿ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಈಗ ಹೊಸ ಚುರುಕು ಸಿಕ್ಕಿದೆ. ಲಸಿಕೆ ಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಜವಾಬ್ದಾರಿಯನ್ನು ಹಿಂಪಡೆದು ತಾನೇ ಖರೀದಿಸಿ ಹಂಚಿಕೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ ದೇಶಾದ್ಯಂತ ಕೋವಿಡ್ ಲಸಿಕೆ ಕಾರ್ಯ ಕ್ಷಿಪ್ರ ಗತಿಯಲ್ಲಿ ಸಾಗಿದೆ. ಸರ್ಕಾರದ ಮಾಹಿತಿ ಪ್ರಕಾರ ಜೂನ್ 21ರ ನಂತರ ದೇಶಾದ್ಯಂತ ವ್ಯಾಪಕವಾಗಿ ಲಸಿಕೆಗಳನ್ನ ಹಾಕಲಾಗಿದೆ. ಜೂನ್ 19ರಿಂದ ಜೂನ್ 25ರವರೆಗಿನ ವಾರದಲ್ಲಿ 3.98 ಕೋಟಿ ಲಸಿಕೆ ಡೋಸ್ಗಳನ್ನ ಹಾಕಲಾಗಿರುವುದು ತಿಳಿದುಬಂದಿದೆ. ಅಂದರೆ ಒಂದೇ ವಾರದಲ್ಲಿ 4 ಕೋಟಿಯಷ್ಟು ವ್ಯಾಕ್ಸಿನ್ ಹಾಕಲಾಗಿದೆ. ಈಗಾಗಲೇ ಮೂರನೇ ಅಲೆಯ ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಚುರುಕುಗೊಂಡಿರುವುದು ಸಾರ್ವಜನಿಕರು ತುಸು ನಿಟ್ಟುಸಿರು ಬಿಡಬಹುದಾಗಿದೆ. ಈ ಲಸಿಕೆ ಅಭಿಯಾನ ಇದೇ ಉತ್ಸಾಹದಲ್ಲಿ ಮುಂದುವರಿದಲ್ಲಿ ಡಿಸೆಂಬರ್ ವೇಳೆಗೆ ಕೇಂದ್ರ ಇಟ್ಟುಕೊಂಡಿದ್ದ ಲಸಿಕಾ ಗುರಿಯನ್ನು ಮುಟ್ಟುವುದು ಕಷ್ಟವಾಗುವುದಿಲ್ಲ. ಡಿಸೆಂಬರ್ ವೇಳೆಗೆ 94 ಕೋಟಿ ಪ್ರಜೆಗಳಿಗೆ ಸಂಪೂರ್ಣ ಲಸಿಕೆ ಹಾಕುವ ಮಹತ್ವಾಕಾಂಕ್ಷಿ ಗುರಿಯನ್ನ ಕೇಂದ್ರ ಇಟ್ಟುಕೊಂಡಿದೆ.
ಜೂನ್ 19ರಿಂದ 25ರವರೆಗೆ 3.98 ಕೋಟಿ ಕೋವಿಡ್ ಲಸಿಕೆ ಹಾಕಿರುವುದು ಭಾರತದ ಮಟ್ಟಿಗೆ ದಾಖಲೆಯಾಗಿದೆ. ಒಂದು ವಾರದಲ್ಲಿ ಅತಿ ಹೆಚ್ಚು ಲಸಿಕೆ ಹಾಕಿದ ದಾಖಲೆ ಸೃಷ್ಟಿಯಾಗಿದೆ. ಏಪ್ರಿಲ್ 3ರಿಂದ 9ರವರೆಗಿನ ವಾರದಲ್ಲಿ 2.47 ಕೋಟಿ ಲಸಿಕೆ ಹಾಕಿದ್ದು ಈವರೆಗಿನ ದಾಖಲೆ ಆಗಿತ್ತು. ಮೇ 15ರಿಂದ 21ರವರೆಗಿನ ವಾರದಲ್ಲಿ 92 ಲಕ್ಷ ಲಸಿಕೆ ಹಾಕಿದ್ದು ಈವರೆಗಿನ ಕಡಿಮೆ ಮೊತ್ತವೆನಿಸಿದೆ. ಆದರೆ, ಈಗ ಲಸಿಕೆ ಕಾರ್ಯ ಮಹಾ ವೇಗ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯತೆ ಹೆಚ್ಚಿದಷ್ಟೂ ಲಸಿಕೆ ಅಭಿಯಾನ ಇನ್ನೂ ಹೆಚ್ಚು ಚುರುಕುಗೊಳ್ಳಲಿದೆ. ಜೂನ್ ತಿಂಗಳ ಒಂದು ವಾರದಲ್ಲಿ ದಾಖಲೆಯ ಪ್ರಮಾಣದಲ್ಲಿ ಲಸಿಕೆ ಹಾಕಿರುವುದು ಇದಕ್ಕೆ ಸಾಕ್ಷಿ.
ಜುಲೈ ತಿಂಗಳಲ್ಲಿ 20 ಕೋಟಿ ಲಸಿಕೆ ಹಾಕುವುದು ಕೇಂದ್ರದ ಗುರಿಯಾಗಿದೆ. ಹಾಗೆಯೇ, ಆಗಸ್ಟ್ ತಿಂಗಳಲ್ಲಿ ಗುರಿಯನ್ನ 30 ಕೋಟಿಗೆ ಇಟ್ಟುಕೊಳ್ಳಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ. ಈ ತಿಂಗಳ ಗುರಿ ಅಂದುಕೊಂಡಂತೆ ಈಡೇರಿದರೆ ಡಿಸೆಂಬರ್ ಅಂತ್ಯದ ವೇಳೆಗೆ 94 ಕೋಟಿ ಮಂದಿಗೆ ವ್ಯಾಕ್ಸಿನ್ ಹಾಕುವ ಗುರಿ ಮುಟ್ಟಬಹುದು ಎಂದು ಈ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.
45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕುವುದು ಸರ್ಕಾರದ ಉದ್ದೇಶವಾದರೂ ಈ ವಾರ ನೀಡಲಾದ ಶೇ. 70ರಷ್ಟು ಲಸಿಕೆಯನ್ನ ಪಡೆದವರು 18ರಿಂದ 44 ವರ್ಷ ವಯೋಮಾನದವರೇ ಆಗಿರುವುದು ಗಮನಾರ್ಹ. 18 ವರ್ಷ ಮೇಲ್ಪಟ್ಟ ವಯೋಮಾನದವರೇ ಹೆಚ್ಚಾಗಿ ಕೋವಿಡ್ ಲಸಿಕೆಗಾಗಿ ಮುಗಿಬಿದ್ದಿದ್ದಾರೆ. ಇನ್ನು, ಜುಲೈ ತಿಂಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ. ಉತ್ತರ ಪ್ರದೇಶ, ರಾಜಸ್ಥಾನದಂತಹ ದೊಡ್ಡ ರಾಜ್ಯಗಳು ಲಸಿಕೆಯ ಪ್ರಮಾಣ ಹೆಚ್ಚಿಸುವ ಇರಾದೆಯಲ್ಲಿವೆ. ಯೋಗಿ ಆದಿತ್ಯನಾಥ್ ನೇತೃತ್ವದ ಉ.ಪ್ರ. ಸರ್ಕಾರ ಒಂದು ವಾರದಲ್ಲಿ 10 ಲಕ್ಷ ಲಸಿಕೆ ಹಾಕಲು ಸಜ್ಜಾಗಿದೆ. ಇನ್ನು, ರಾಜಸ್ಥಾನ ಸರ್ಕಾರ ಕೂಡ ಲಸಿಕೆ ಲಭ್ಯ ಇದ್ದಲ್ಲಿ ಒಂದು ವಾರದಲ್ಲಿ 15 ಲಕ್ಷ ಲಸಿಕೆ ಹಾಕಬಲ್ಲೆವು ಎಂದು ಹೇಳುತ್ತಿದೆ. ಜೂನ್ 25ರಂದು ಒಂದೇ ದಿನ ರಾಜಸ್ಥಾನ 9 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕಿ ಗಮನ ಸೆಳೆದಿತ್ತು.
ಈವರೆಗೆ ಅತಿಹೆಚ್ಚು ಲಸಿಕೆ ಹಾಕಿದ ದಾಖಲೆ ಮಹಾರಾಷ್ಟ್ರದ್ದಾಗಿದೆ. ಈ ರಾಜ್ಯದಲ್ಲಿ 3.03 ಕೋಟಿ ಲಸಿಕೆ ಹಾಕಲಾಗಿದೆ. ಈಗ ನಿತ್ಯ 7-8 ಲಕ್ಷ ಲಸಿಕೆ ಹಾಕುತ್ತಿರುವ ಉತ್ತರ ಪ್ರದೇಶದಲ್ಲಿ ಈವರೆಗೆ 2.99 ಕೋಟಿ ಡೋಸ್ಗಳನ್ನ ಜನರಿಗೆ ನೀಡಲಾಗಿದೆ. ಕರ್ನಾಟಕ ಕೂಡ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಹಾಕಿದೆ.