Weekend Curfew: ರಾಜ್ಯಾದ್ಯಂತ ಇಂದು-ನಾಳೆ ವೀಕೆಂಡ್ ಕರ್ಫ್ಯೂ; ಮೈಸೂರಿನಲ್ಲಿ ಕೊನೆಗೂ ಅನ್ಲಾಕ್ ಶುರು
ಬೆಂಗಳೂರು(ಜೂ.26): ರಾಜ್ಯದಲ್ಲಿ ನಿನ್ನೆ ಸಂಜೆಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಸಹ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲ. ಎಂದಿನಂತೆ ಇಂದೂ ಸಹ ವಾಹನಗಳು ಸಂಚರಿಸುತ್ತಿವೆ. ಅನ್ ಲಾಕ್ ಆಗಿದೆ ಅಂತ ಬೈಕ್, ಆಟೋ, ಕ್ಯಾಬ್ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಬೆರಳೆಣಿಕೆಯಷ್ಟು ಬಿಎಂಟಿಸಿ ಬಸ್ಗಳು ಸಂಚಾರ ನಡೆಸುತ್ತಿವೆ. ಇಂದು, ನಾಳೆ ಹಾಗೂ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ.
ಇನ್ನು, ಬಿಎಂಟಿಸಿ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಣಗುಡುತ್ತಿವೆ. ಎರಡು ದಿನ ವೀಕೆಂಡ್ ಕರ್ಪ್ಯೂ ಹಿನ್ನಲೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಎಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಬಸ್ಗಳು ಸಂಚರಿಸುತ್ತಿವೆ. ಆದರೆ ಪ್ರಯಾಣಿಕರಿಲ್ಲದೆ ಖಾಲಿ ಬಸ್ಗಳು ಓಡಾಡುತ್ತಿವೆ. ನಿನ್ನೆ ಸಂಜೆಯಿಂದಲೇ ವೀಕೆಂಡ್ ಕರ್ಫ್ಯೂ ಇರೋದ್ರಿಂದ ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಮುಖ ಮಾಡಿಲ್ಲ.
ಆದರೆ ಮೆಜೆಸ್ಟಿಕ್/ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಜನಜಂಗುಳಿ ಸೇರಿತ್ತು. ಜನರು ಬೆಳ್ಳಂಬೆಳಗ್ಗೆ ರೈಲುಗಳ ಮೂಲಕ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದ ದೃಶ್ಯ ಕಂಡು ಬಂತು. ವೀಕೆಂಡ್ ಕರ್ಫ್ಯೂ ಹಿನ್ನಲೆ ಬಸ್ಗಳ ಸಂಖ್ಯೆಯಲ್ಲಿ ಕಡಿತ ಮಾಡಿರುವ ಕಾರಣಕ್ಕೆ ಪ್ರಯಾಣಿಕರು ರೈಲುಗಳ ಮೊರೆ ಹೋದರು. ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳ ಕಡೆ ಜನರು ಪ್ರಯಾಣ ಬೆಳೆಸಿದ್ದರು.
ಇನ್ನು, ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿ ಸಾರಿಗೆ ಬಸ್ಗಳ ಸೇವೆ ಕಡಿತಗೊಳಿಸಿದೆ. ಶುಕ್ರವಾರ 25ರ ಸಂಜೆ 7ರಿಂದ 28ರ ಸೋಮವಾರ ಬೆಳಿಗ್ಗೆ 5ರ ವರೆಗೆ ವಾರಾಂತ್ಯ ಕರ್ಫ್ಯೂ ಹಿನ್ನೆಲೆ, ಸಾರಿಗೆ ಸೇವೆಯನ್ನು ಶೇ. 30ಕ್ಕೆ ಇಳಿಸಿದೆ. ವಾರಾಂತ್ಯದಲ್ಲಿ 1200 ಬಸ್ ಗಳನ್ನು ಮಾತ್ರ ಆಪರೇಟ್ ಮಾಡಲು ಬಿಎಂಟಿಸಿ ನಿರ್ಧರಿಸಿದೆ. ಸದ್ಯ ಅನ್ ಲಾಕ್ 2.O ಅವಧಿಯಲ್ಲಿ ಬಿಎಂಟಿಸಿ 4000 ಬಸ್ ಗಳ ಸೇವೆ ಒದಗಿಸುತ್ತಿದೆ. ಕರ್ಫ್ಯೂ ಕಾರಣದಿಂದ ಜನ ಸಂಚಾರ ಕಡಿಮೆ ಆಗುವ ಹಿನ್ನೆಲೆಯಲ್ಲಿ ಬಸ್ ಸೇವೆಯನ್ನು ಶೇ. 30ಕ್ಕೆ ಇಳಿಸಿದೆ.
ಎಲ್ಲಾ ಜಿಲ್ಲೆಗಳಲ್ಲೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ರಾಜ್ಯದಾದ್ಯಂತ ಇಂದಿನಿಂದ ಎರಡು ದಿನಗಳ ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆ, ಪುತ್ತೂರಿನಲ್ಲಿ ಇಂದು ಮತ್ತೆ ನಾಳೆ ಸಂಪೂರ್ಣ ಬಂದ್ ಇದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ವೀಕೆಂಡ್ ಕರ್ಫ್ಯೂ ಇದೆ. ಹಾಲು, ಪೇಪರ್ ಅಂಗಡಿ, ಮೆಡಿಕಲ್ ಹೊರತು ಪಡಿಸಿ ಉಳಿದೆಲ್ಲವೂ ಬಂದ್ ಆಗಿದೆ. ಅನಗತ್ಯ ತೆರಳುವ ವಾಹನಗಳಿಗೆ ಪೋಲೀಸರು ದಂಡ ವಿಧಿಸುತ್ತಿದ್ದಾರೆ.
ಹುಬ್ಬಳ್ಳಿ ಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವಾರಾಂತ್ಯದ ಲಾಕ್ ಡೌನ್ ಜಾರಿಯಲ್ಲಿದೆ. ವಾರಾಂತ್ಯದ ಲಾಕ್ ಡೌನ್ ನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಿರಾಣಿ, ಹಾಲು, ಹಣ್ಣು, ತರಕಾರಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯದ ಅಂಗಡಿ, ಮಾಂಸ, ಹೋಟೆಲ್ ಪಾರ್ಸೆಲ್ ಹಾಗೂ ಬೀದಿ ಬದಿಯ ವ್ಯಾಪಾರಕ್ಕೂ ಮಧ್ಯಾಹ್ನ 2 ಗಂಟೆವರೆಗೆ ಅನುಮತಿ ನೀಡಲಾಗಿದೆ.
ಇನ್ನು, ಬೀದರ್ ನಗರದ ಕೆಂದ್ರ ಬಸ್ ನಿಲ್ದಾಣದಲ್ಲಿ ಬಸ್ಗಳು ಖಾಲಿ ಖಾಲಿಯಾಗಿವೆ. ಪ್ರಯಾಣಿಕರಿಗಾಗಿ ಡ್ರೈವರ್ ಹಾಗೂ ಕಂಡಕ್ಟರ್ ಕಾದು ಕುಳಿತಿವೆ. ಕೇವಲ ಬೆರಳೆಣಿಕೆಷ್ಟು ಪ್ರಯಾಣಿಕರು ಮಾತ್ರ ಬರುತ್ತಿದ್ದಾರೆ.
ಕಲಬುರಗಿಯಲ್ಲಿ ಇಂದು, ನಾಳೆ ವೀಕೆಂಡ್ ಲಾಕ್ ಡೌನ್ ಹಿನ್ನೆಲೆ, ಅಗತ್ಯ ಸೇವೆ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದಾಗ್ಯೂ ಸಾರಿಗೆ ಬಸ್ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಲಾಕ್ಡೌನ್ ನಡುವೆಯೂ ಆಟೋ ಸಂಚಾರ ಎಂದಿನಂತೆ ಇದೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ , ಸೇರಿ ವಿವಿಧ ತಾಲೂಕಿನಲ್ಲಿ ಕರ್ಫ್ಯೂ ಬಿಸಿ ಕಾಣುತ್ತಿಲ್ಲ. ಕರ್ಫ್ಯೂ ಇದ್ದರೂ ಎಂದಿನಂತೆ ಜನರ ಸಂಚಾರವಿದೆ. ಆಟೋ, ಬಸ್ ಓಡಾಟ ಸಹ ಪ್ರಾರಂಭವಾಗಿದೆ. ಅಗತ್ಯ ವಸ್ತು, ಹೂವು, ಹಣ್ಣು ಅಂಡಿಗಳು ಓಪನ್ ಆಗಿವೆ. ಇತರೆ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ.