Karnataka Weather Today: ಕರಾವಳಿಯಲ್ಲಿ ಇಂದಿನಿಂದ 3 ದಿನ ಯಲ್ಲೋ ಅಲರ್ಟ್; ಉ.ಕ.ದಲ್ಲಿ ಮಳೆಯ ಅಬ್ಬರ, ಮನೆಗಳಿಗೆ ನುಗ್ಗಿದ ನೀರು
Karnataka Rains ಬೆಂಗಳೂರು (ಜೂನ್ 27): ಕಳೆದೊಂದು ವಾರದಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ನಿನ್ನೆಯಿಂದ ತನ್ನ ಆರ್ಭಟ ಶುರು ಮಾಡಿದ್ದಾನೆ. ಸತತ 10 ದಿನಗಳ ಕಾಲ ಒಂದೇ ಸಮನೆ ಸುರಿದಿದ್ದ ಮಳೆಗೆ ಮಲೆನಾಡು ಮತ್ತು ಕರಾವಳಿ ಜನರು ತತ್ತರಿಸಿ ಹೋಗಿದ್ದರು. ಈಗ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು, ಮತ್ತೊಂದು ಹಂತದಲ್ಲಿ ಅಧಿಕ ಮಳೆಯಾಗುವ ನಿರೀಕ್ಷೆಯಿದೆ. ನಿನ್ನೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಿದೆ. ಇಂದಿನಿಂದ 3 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಇಂದಿನಿಂದ ಮೂರು ದಿನ ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಇಂದಿನಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಜೂನ್ 30ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಥೇಚ್ಛ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿಯೂ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಇಂದಿನಿಂದ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ವಲಯದ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ಈಗಾಗಲೇ ನೆರೆಯ ರಾಜ್ಯಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕರ್ನಾಟಕದಲ್ಲೂ ಮತ್ತೊಂದು ಹಂತದ ಮಳೆ ಮತ್ತೆ ಶುರುವಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ಆದರೆ, ಕರಾವಳಿಯಲ್ಲಿ ಇಂದು ಮಳೆಯ ಅಬ್ಬರ ಹೆಚ್ಚಾಗಲಿದೆ. ಇಂದಿನಿಂದ 29ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನಿನ್ನೆ ಕೂಡ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಬೆಳಗ್ಗೆಯಿಂದಲೇ ಮಳೆ ಸುರಿಯಲಿದೆ.
ಜೂನ್ 28ರಿಂದ 2 ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಜೂನ್ 28ರವರೆಗೆ ಸಾಧಾರಣ ಮಳೆಯಾಗಲಿದೆ. ಗುಡುಗು ಸಹಿತ ಭಾರೀ ಮಳೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಜೂನ್ 30ರವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕ ಮಾತ್ರವಲ್ಲದೆ, ಒಡಿಶಾ, ಭುವನೇಶ್ವರದಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಭುವನೇಶ್ವರದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ. ಅನೇಕ ಕಡೆ ರಸ್ತೆಗಳು ಬಂದ್ ಆಗಿದ್ದು, ನದಿ ತೀರದ ಗ್ರಾಮಗಳಿಗೂ ನೀರು ನುಗ್ಗಿದೆ. ಇಷ್ಟೇ ಅಲ್ಲದೆ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್ ರಾಜ್ಯಗಳಲ್ಲೂ ಸಾಧಾರಣ ಮಳೆಯಾಗಲಿದೆ. ಹಾಗೇ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್ನಲ್ಲೂ ಇನ್ನು 3 ದಿನ ಮಳೆಯ ಅಬ್ಬರವಿರಲಿದೆ.
ರಾಯಚೂರಿನಲ್ಲಿ ರಾತ್ರಿ ಸುರಿದ ಧಾರಕಾರ ಮಳೆಗೆ ಮಸ್ಕಿಯ ಗಾಂಧಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರ ಹಾಕಲು ಸ್ಥಳೀಯರು ರಾತ್ರಿ ಇಡೀ ಪರದಾಡುವಂತಾಯಿತು. ಜೀಪು, ಬೈಕ್ ಗಳು ನೀರಿನಲ್ಲಿ ಮುಳಗಿದ್ದವು. ಜನಜೀವನ ಅಸ್ತವ್ಯಸ್ತವಾಗಿ ಜನರು ಪರದಾಟ ನಡೆಸಿದರು.
ಇನ್ನು, ಗದಗ ಜಿಲ್ಲೆಯಲ್ಲಿ ಹಲವೆಡೆ ಭಾರಿ ಮಳೆಯಾಗಿದೆ. ಗಜೇಂದ್ರಗಡ ಪಟ್ಟಣದಲ್ಲಿ ಮಳೆ ಅಬ್ಬರಕ್ಕೆ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಗಜೇಂದ್ರಗಡ ಪಟ್ಟಣದ ಜಿ ಎಸ್ ನಗರದಲ್ಲಿ ಈ ಘಟನೆ ನಡೆದಿದೆ. ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಸ್ಥಳೀಯರು ಹರಸಾಹಸ ಪಟ್ಟರು. ಮಳೆಯ ಆರ್ಭಟದಿಂದ ಜನರ ಪರದಾಟ ನಡೆಸಿದರು. ಗಜೇಂದ್ರಗಡದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.
ಯಾದಗಿರಿ ಜಿಲ್ಲೆಯಲ್ಲಿ ಸಾಧರಣ ಮಳೆಯಾಗುತ್ತಿದೆ. ತಡರಾತ್ರಿಯಿಂದ ಮಳೆ ಸುರಿಯುತ್ತಿದೆ. ಜಿಲ್ಲೆಯ ಸುರಪುರ, ಶಹಾಪುರ, ಗುರುಮಠಕಲ್, ವಡಗೇರಾ ಹಾಗೂ ವಿವಿಧೆಡೆ ಮಳೆಯ ಅಬ್ಬರ ಹೆಚ್ವಾಗಿದೆ. ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.