ಟಿಪ್ಪು ಶಸ್ತ್ರಾಗಾರಕ್ಕೆ ಹೊಸ ರೂಪ; 35 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ನವೀಕರಣ!

ಎಚ್‌.ಪಿ. ಪುಣ್ಯವತಿ ಬೆಂಗಳೂರು
ಎರಡು ಶತಮಾನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬೆಂಗಳೂರಿನ ಏಕೈಕ ಟಿಪ್ಪು ಶಸ್ತ್ರಾಗಾರಕ್ಕೆ ಇದೀಗ ಕಾಯಕಲ್ಪ ಕಲ್ಪಿಸಲಾಗುತ್ತಿದೆ. ಟಿಪ್ಪು ಬೇಸಿಗೆ ಅರಮನೆ ಸಮೀಪದಲ್ಲೇ ಇರುವ ಕಲಾಸಿಪಾಳ್ಯದ ಟಿಪ್ಪು ಶಸ್ತ್ರಾಗಾರ (ಮದ್ದು, ಗುಂಡುಗಳನ್ನು ಸಂಗ್ರಹಿಸಿಡುವ ಉಗ್ರಾಣ) ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

 

ವಿಶೇಷ ವಿನ್ಯಾಸದಲ್ಲಿದ್ದ ಈ ಕಟ್ಟಡದ ಗೋಡೆಗಳು ಪೂರ್ತಿ ಹಾಳಾಗಿದ್ದವು. ಸುಣ್ಣ, ಮಣ್ಣು ಬೀಳುತ್ತಿತ್ತು. ಮಳೆ ಬಂದಾಗ ನೀರು ಸುರಿಯುತ್ತಿತ್ತು. ಬಾಗಿಲು ಇಲ್ಲದೆ ಅಲ್ಲಿನ ಬೀದಿ ಹೋಕರಿಗೆ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇದೊಂದು ಸಂರಕ್ಷಿತ ಸ್ಮಾರಕವೆಂದು ಪಟ್ಟಿಯಲ್ಲಿ ಸೇರಿಸದ ಕಾರಣ ಈ ಶಸ್ತ್ರಾಗಾರವನ್ನು ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳು ನಿರ್ವಹಣೆ ಮಾಡದೆ ಕಡೆಗಣಿಸಿದ್ದವು.

ಟಿಪ್ಪು ಅರಮನೆಗೆ ನಿತ್ಯ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಬಂದವರು ಈ ಟಿಪ್ಪು ಶಸ್ತ್ರಾಗಾರಕ್ಕೂ ಭೇಟಿ ನೀಡುತ್ತಾರೆ. ಹೀಗಾಗಿ ಅದನ್ನು ನವೀಕರಿಸಬೇಕು ಎಂದು ವಾಸ್ತುಶಿಲ್ಪಿಗಳು, ಇತಿಹಾಸ ತಜ್ಞರು, ಪಾರಂಪರಿಕ ತಜ್ಞರು ಹೀಗೆ ಹಲವರು ಒತ್ತಾಯಿಸಿದ್ದರು. ಇವರ ಜತೆಗೆ ಇಂಟ್ಯಾಕ್ ನ ಸಂಚಾಲಕರಾಗಿದ್ದ ದಿ. ಎಚ್.ಆರ್. ಪ್ರತಿಭಾ ಅವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ರಾಜ್ಯ ಪುರಾತತ್ವ ಇಲಾಖೆಯು ಕಲಾಸಿಪಾಳ್ಯದ ಶಸ್ತ್ರಾಗಾರವನ್ನು ನವೀಕರಿಸುವ ಜವಾವ್ದಾರಿ ಹೊತ್ತುಕೊಂಡಿದೆ. ಅದರಂತೆ 35 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಶಸ್ತ್ರಾಗಾರವನ್ನು ನವೀಕರಿಸಲಾಗುತ್ತಿದೆ.

ಟಿಪ್ಪು ಶಸ್ತ್ರಾಗಾರಕ್ಕೆ ಹೊಸ ರೂಪ

ಮೂಲ ಮಾದರಿಯಲ್ಲಿ ನವೀಕರಣ
2021ರ ಜನವರಿ-ಫೆಬ್ರುವರಿಯಲ್ಲಿ ಶಸ್ತ್ರಾಗಾರದ ನವೀಕರಣ ಆರಂಭಿಸಿದೆವು. ಆನೆ ಆಕಾರದಲ್ಲಿರುವ ಈ ಕಟ್ಟಡದ ಗೋಡೆಗಳು ಹಳೆಯದಾಗಿದ್ದವು. ಶಸ್ತ್ರಾಗಾರದ ಸಮೀಪದಲ್ಲೇ ಇದ್ದ ಆಲ ನರದ ಬೇರುಗಳು ಈ ಕಟ್ಟಡದ ಗೋಡೆಗಳೊಳಗೆ ಬೆಳೆದುಕೊಂಡಿದ್ದವು. ಗೋಡೆ ಪಾಚಿ ಕಟ್ಟಿಕೊಂಡಿತ್ತು. ಮೆಟ್ಟಿಲುಗಳು ಹಾಳಾಗಿದ್ದವು. ಇದೀಗ ಕಟ್ಟಡದ ಮೂಲ ಸ್ವರೂಪಕ್ಕೆ ತೊಂದರೆಯಾಗದಂತೆ ನವೀಕರಿಸುತ್ತಿದ್ದೇವೆ‌ ಎಂದು ರಾಜ್ಯ ಪುರಾತತ್ವ ಇಲಾಖೆಯ ಎಂಜಿನಿಯರ್ ಶಿವಾನಂದ ಕಡನೀಕರ್ ತಿಳಿಸಿದರು.

 

ಟಿಪ್ಪು ಶಸ್ತ್ರಾಗಾರಕ್ಕೆ ಹೊಸ ರೂಪ

ಗೋಡೆಗಳನ್ನು ಕೆರೆದು, ಸುಣ್ಣ, ಬೆಲ್ಲ ಮಿಶ್ರಣದ ಗಾರೆ ಮಾಡಲಾಗುತ್ತಿದೆ. ಹಾಳಾಗಿದ್ದ ಮೆಟ್ಟಿಲುಗಳನ್ನು ತೆಗೆದು ಹೊಸದಾಗಿ ನಿರ್ಮಿಸುತ್ತಿದ್ದೇವೆ. ಸುತ್ತಲೂ ರಕ್ಷಣಾ ಗೋಡೆ, ಗೇಟಿನ ವ್ಯವಸ್ಥೆಯೊಂದಿಗೆ ಭದ್ರಪಡಿಸಲಾಗುತ್ತಿದೆ. ಒಂದರೆಡು ತಿಂಗಳಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಿವಾನಂದ ಕಡನೀಕರ್ ಮಾಹಿತಿ ನೀಡಿದರು.

ಶಸ್ತ್ರಾಗಾರದ ವಿಶೇಷ
ಈ ಮದ್ದಿನ ಮನೆಯ ನಿರ್ಮಾಣದ ಖಚಿತ ಕಾಲ ತಿಳಿದು ಬಂದಿಲ್ಲ. ಆದರೆ ಇದನ್ನು 18ನೇ ಶತಮಾನದಲ್ಲಿ ನಿರ್ಮಿಸಲಾಯಿತೆಂದು ಭಾವಿಸಲಾಗಿದೆ. ಈ ಮದ್ದಿನ ಮನೆಯು ಶಸ್ತ್ರಾಗಾರವಾಗಿ ಮತ್ತು ಸಿಡಿಮದ್ದಿನ ಉಗ್ರಾಣವಾಗಿ ಕಾರ್ಯನಿರ್ವಹಿಸಿವೆ. ಸಾಮಾನ್ಯವಾಗಿ ಈ ಮದ್ದಿನ ಮನೆಯು 13.33 ಮೀಟರ್ ಉದ್ದ, 10.12 ಮೀಟರ್ ಅಗಲವಾಗಿದ್ದು, 4 ಅಡಿಗೂ ದಪ್ಪನಾದ ಗೋಡೆಯನ್ನು ಹೊಂದಿದೆ. ರೋಮನ್ ಎ ಅಕ್ಷರದ ಮಾದರಿಯಲ್ಲಿ ಬಾಗಿದ ಮೇಲ್ಛಾವಣಿಯನ್ನು ಹೊಂದಿದೆ. ಇಡೀ ಕಟ್ಟಡವನ್ನು ಇಟ್ಟಿಗೆ ಮತ್ತು ಗಾರೆಯ ಸಹಾಯದಿಂದ ನಿರ್ಮಿಸಲಾಗಿದೆ. ಈ ಕಟ್ಟಡದ ಬಹುತೇಕ ಭಾಗ ಭೂಮಿಯ ಒಳಭಾಗದಲ್ಲಿದ್ದು, ಛಾವಣಿಯ ಭಾಗ ಮಾತ್ರ ಭೂಮಿಯಿಂದ ಮೇಲೆ ಕಂಡುಬರುತ್ತದೆ. ಪ್ರಾಯಶಃ ಸಿಡುಮದ್ದನ್ನು ತಂಪಾದ ವಾತಾವರಣದಲ್ಲಿ ಸಂರಕ್ಷಿಸಲು ಈ ವ್ಯವಸ್ಥೆ ಮಾಡಿರಬಹುದು.

ಮೂಲ ಮಾದರಿಯಲ್ಲಿ ಉತ್ತಮ ರೀತಿಯಲ್ಲಿ ನವೀಕರಿಸಲಾಗುತ್ತಿದೆ. ಇದಕ್ಕಾಗಿ ತಮಿಳುನಾಡಿನಿಂದ ಕಾರ್ಮಿಕರನ್ನು ಕರೆಸಲಾಗಿದೆ. ನವೀಕೃತ ಶಸ್ತ್ರಾಗಾರವನ್ನು ರಾಜ್ಯ ಅಥವಾ ಕೇಂದ್ರ ಪುರಾತತ್ವ ಇಲಾಖೆಯವರು ಸುಪರ್ದಿಗೆ ಪಡೆಯಲಿ. ನೋಡಿಗರಿಗೆ ಶುಲ್ಕ ನಿಗದಿಪಡಿಸಿ, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಸಾಧ್ಯವಾದರೆ ಶಸ್ತ್ರಾಗಾರದೊಳಗೆ ಫಿರಂಗಿ, ಮದ್ದು, ಗುಂಡುಗಳ ಬಗ್ಗೆ ಮ್ಯೂಸಿಯಂ ಕೂಡ ಮಾಡಬಹುದು. ಈ ಮೂಲಕ ಬೆಂಗಳೂರಿನ ಏಕೈಕ ಶಸ್ತ್ರಾಗಾರವನ್ನು ಪ್ರವಾಸಿ ತಾಣವಾಗಿಸಬೇಕು.
ಮನ್ಸೂರ್ ಅಲಿ, ವಾಸ್ತುಶಿಲ್ಪಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *