ಕೋವಿಡ್ ಡೆತ್ ಅನಾಲಿಸೀಸ್: ಬೆಂಗಳೂರಿನಲ್ಲಿ 107 ದಿನಗಳಲ್ಲಿ 910 ಸೋಂಕಿತರು ಮನೆಯಲ್ಲೇ ಸಾವು..!

ಹೈಲೈಟ್ಸ್‌:

  • ಬಿಬಿಎಂಪಿಯ ಸಾವು ವಿಶ್ಲೇಷಣಾ ಸಮಿತಿಯಿಂದ ವರದಿ ಸಿದ್ಧ
  • ಮಾರ್ಚ್‌ 1 ರಿಂದ ಜೂನ್ 15ರ ಅವಧಿಯಲ್ಲಿ ಸಾವುಗಳ ವರದಿ
  • ಮನೆಯಲ್ಲಿಯೇ ಪ್ರತ್ಯೇಕ ಆರೈಕೆಯಲ್ಲಿದ್ದವರು 5.66 ಲಕ್ಷ
  • ಸಾವಿಗೀಡಾದವರಲ್ಲಿ 50 ವರ್ಷ ಮೇಲ್ಪಟ್ಟವರೇ ಹೆಚ್ಚು
  • ಪಾಲಿಕೆಯ ಪೂರ್ವ ವಲಯದಲ್ಲೇ ಅಧಿಕ ಸಾವಿನ ಪ್ರಕರಣ ವರದಿ

ಬೆಂಗಳೂರುನಗರದಲ್ಲಿ ಕೋವಿಡ್‌ ಎರಡನೇ ಅಲೆಯ ಆರ್ಭಟಕ್ಕೆ ಸಾವಿರಾರು ಮಂದಿ ಬಲಿಯಾದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟವರ ಸಂಖ್ಯೆ ಒಂದೆಡೆಯಾದರೆ, ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗಿದ್ದವರು ಕೂಡ ಕೊನೆಯುಸಿರೆಳೆದಿದ್ದಾರೆ. ಕೇವಲ 107 ದಿನಗಳಲ್ಲಿ 910 ಮಂದಿ ಸಾವಿಗೆ ಶರಣಾಗಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟ ಬಳಿಕ ಹೋಮ್‌ ಐಸೋಲೇಷನ್‌ಗೆ ಒಳಗಾಗಿದ್ದವರ ಪೈಕಿ ಮನೆಯಲ್ಲಿ ಹಾಗೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿರುವವರ ಕುರಿತು ಬಿಬಿಎಂಪಿ ರಚಿಸಿರುವ ಸಾವು ವಿಶ್ಲೇಷಣಾ ಸಮಿತಿಯು (ಡೆತ್‌ ಅನಾಲಿಸಿಸ್‌ ಕಮಿಟಿ) ವರದಿ ಸಿದ್ಧಪಡಿಸಿದೆ. ಮನೆಯಲ್ಲಿ ಆರೈಕೆ ಪಡೆದುಕೊಳ್ಳುತ್ತಿದ್ದವರು ಯಾವ ಕಾರಣದಿಂದ ಸಾವಿಗೀಡಾಗಿದ್ದಾರೆ ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಆದರೆ, ಪಾಲಿಕೆಯು ಆ ವರದಿಯನ್ನು ಈವರೆಗೆ ಬಹಿರಂಗಪಡಿಸಿಲ್ಲ.

ಕಳೆದ ಮಾರ್ಚ್‌ನಿಂದ ದಿಢೀರ್‌ ಲಗ್ಗೆ ಇಟ್ಟ ಎರಡನೇ ಅಲೆಯ ಸೋಂಕು ನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಇದರಿಂದ ಸೋಂಕು ಪೀಡಿತವಾಗಿದ್ದ ಕುಟುಂಬಗಳು ತತ್ತರಿಸಿ ಹೋದವು. ಬಿಬಿಎಂಪಿಯು ಸಕಾಲಕ್ಕೆ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವಲ್ಲಿ ವಿಫಲವಾಗಿದ್ದರಿಂದ ಹಲವರು ಮನೆಯಲ್ಲಿಯೇ ಜೀವ ಬಿಡುವಂತಾಯಿತು.

ಎರಡನೇ ಅಲೆಯಲ್ಲಿ ಸೋಂಕು ಪತ್ತೆ ಪ್ರಮಾಣಕ್ಕಿಂತ ಈ ರೋಗದಿಂದ ಸಾಯುತ್ತಿರುವವರ ಪ್ರಮಾಣವೇ ಹೆಚ್ಚಿದೆ. ಮೇ ತಿಂಗಳ ಆರಂಭದಲ್ಲಿ ಸೋಂಕು ಪತ್ತೆ ಪ್ರಮಾಣವು ಶೇ 37.69ಕ್ಕೆ ಏರಿಕೆಯಾಗಿತ್ತು. ಮರಣ ದರವು ಶೇ 0.74ರಷ್ಟಿತ್ತು. ಈ ದರವು ಮೇ ಅಂತ್ಯದ ವೇಳೆಗೆ ಶೇ 6.70ಕ್ಕೆ ಹೆಚ್ಚಳವಾಗಿತ್ತು. ಸದ್ಯ ಸೋಂಕು ಪತ್ತೆ ಪ್ರಮಾಣವು ಶೇ 1.46ಕ್ಕೆ ಇಳಿಕೆಯಾಗಿದ್ದರೂ, ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ.

107 ದಿನಗಳಲ್ಲಿ 910 ಮಂದಿ ಸಾವು:

ಕೋವಿಡ್‌ನ ಎರಡನೇ ಅಲೆಯ ಸೋಂಕು ವ್ಯಾಪಿಸಿದ ಮಾರ್ಚ್ 1 ರಿಂದ ಜೂನ್ 15ರವರೆಗೆ ನಗರದಲ್ಲಿ ಸೋಂಕಿಗೆ ತುತ್ತಾಗಿದ್ದವರ ಪೈಕಿ ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗಿದ್ದವರಲ್ಲಿ 910 ಮಂದಿ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 5.66 ಲಕ್ಷ ಮಂದಿ ಹೋಮ್‌ ಐಸೋಲೇಷನ್‌ನಲ್ಲಿದ್ದರು. ಈ ಸಂದರ್ಭದಲ್ಲಿ ಹೋಮ್‌ ಐಸೋಲೇಷನ್‌ನಲ್ಲಿದ್ದವರ ಮರಣ ದರವು ಶೇ 0.16ರಷ್ಟಿತ್ತು.

2ನೇ ಅಲೆಯ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ನಿತ್ಯ 20 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಯಿತು. ಈ ಸಂದರ್ಭದಲ್ಲಿ ಹಾಸಿಗೆ, ಐಸಿಯು, ಐಸಿಯು ವೆಂಟಿಲೇಟರ್‌ಗಳ ಕೊರತೆ ಉಂಟಾಗಿದ್ದರಿಂದ ಹಲವರು ಪ್ರಾಣವಾಯು ಮತ್ತು ಸಕಾಲಕ್ಕೆ ಚಿಕಿತ್ಸೆ ಸಿಗದೆ ನರಳಾಡಿ ಸತ್ತರು. ಹೀಗಾಗಿ, ಸೂಕ್ತ ವ್ಯವಸ್ಥೆ ಇಲ್ಲದಿದ್ದರೂ ಶೇ 90ರಷ್ಟು ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗಿದ್ದರು. ಇವರ ಮೇಲೆ ನಿಗಾ ಇಡುವ ಕೆಲಸವನ್ನೂ ಪಾಲಿಕೆ ಮಾಡಲಿಲ್ಲ. ಪರಿಣಾಮ, ತೀವ್ರ ಉಸಿರಾಟದ ಸಮಸ್ಯೆ, ಹೃದಯಾಘಾತದಿಂದ ಹಲವರು ಮನೆಯಲ್ಲಿಯೇ ಅಸುನೀಗಿದರು. ಕೆಲವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟರು.

ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿ: ನಗರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ 2021ರ ಫೆ. 28ರವರೆಗೆ ಕೇವಲ 4480 ಮಂದಿ ಸಾವಿಗೀಡಾಗಿದ್ದರು. ಎರಡನೇ ಅಲೆ ಅಬ್ಬರ ಶುರುವಾದ ನಾಲ್ಕು ತಿಂಗಳ ಅವಧಿಯಲ್ಲಿ 11,091 ಮಂದಿ ಮೃತಪಟ್ಟಿದ್ದಾರೆ.

ಸೋಂಕಿನ ಭೀತಿಯಿಂದಾಗಿ ಹಲವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿಲ್ಲ. ಪರಿಣಾಮ, ಉಸಿರಾಟ ಸಮಸ್ಯೆಯಿಂದ ಹಲವರು ಮನೆಯಲ್ಲಿಯೇ ಜೀವ ಕಳೆದುಕೊಂಡಿದ್ದಾರೆ. ಇವರಲ್ಲಿ 50 ವರ್ಷ ಮೇಲ್ಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನ್ಯ ಕಾಯಿಲೆಯಿಂದ ಬಳಲುತ್ತಿದ್ದ 40 ವರ್ಷದೊಳಗಿನವರು ಸಹ ಕೊನೆಯುಸಿರೆಳೆದಿದ್ದಾರೆ.

‘ಕೋವಿಡ್‌ ಸಾವು ವಿಶ್ಲೇಷಣಾ ವರದಿ ಸಿದ್ಧವಾಗಿದ್ದು, ಸದ್ಯದಲ್ಲೇ ಮುಖ್ಯ ಆಯುಕ್ತರಿಗೆ ಸಲ್ಲಿಸಲಾಗುವುದು. ಹೋಮ್‌ ಐಸೋಲೇಷನ್‌ನಲ್ಲಿದ್ದ ಸೋಂಕಿತರ ಸಾವಿಗೆ ಕಾರಣಗಳನ್ನೂ ಪಟ್ಟಿ ಮಾಡಲಾಗಿದೆ. ಮನೆಯಲ್ಲಿಯೇ ಪ್ರತ್ಯೇಕ ವಾಸಕ್ಕೆ ಒಳಗಾಗುವವರು ಕೊನೆಯುಸಿರೆಳೆದಾಗ ಅವರ ಕುಟುಂಬಸ್ಥರು ತಕ್ಷಣವೇ ಬಿಬಿಎಂಪಿಗೆ ಮಾಹಿತಿ ನೀಡುತ್ತಿಲ್ಲ. ಹಾಗಾಗಿ, ಅಂತಹ ಸಾವಿನ ಪ್ರಕರಣಗಳು ತಡವಾಗಿ ವರದಿಯಾಗುತ್ತಿವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *