ರಾಜ್ಯದ 14 ಸಾವಿರ ಅಂಗನವಾಡಿಗಳಲ್ಲಿ ವಿದ್ಯುತ್ ದೀಪವಿಲ್ಲ, ಶೌಚಾಲಯಗಳೂ ಇಲ್ಲ..!

ಹೈಲೈಟ್ಸ್‌:

  • 13 ಸಾವಿರ ಕೇಂದ್ರಗಳಲ್ಲಿ ಶೌಚಾಲಯ ಇಲ್ಲ
  • 18 ಸಾವಿರ ಕೇಂದ್ರಗಳಲ್ಲಿ ಫ್ಯಾನ್ ಇಲ್ಲ
  • ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಹಣಕಾಸಿನ ಲಭ್ಯತೆ ಇಲ್ಲ ಎಂದ ಸರ್ಕಾರ

ಬೆಂಗಳೂರು: ರಾಜ್ಯದ 14 ಸಾವಿರ ಅಂಗನವಾಡಿಗಳಲ್ಲಿ ವಿದ್ಯುತ್‌ ದೀಪಗಳಿಲ್ಲ. 13 ಸಾವಿರ ಕೇಂದ್ರಗಳಲ್ಲಿ

ಶೌಚಾಲಯ ಇಲ್ಲ ಹಾಗೂ 18 ಸಾವಿರ ಕೇಂದ್ರಗಳಲ್ಲಿ ಫ್ಯಾನ್‌ ಇಲ್ಲ ಎಂದು ಹೈಕೋರ್ಟ್‌ ಮುಂದೆ ಸ್ವತಃ ರಾಜ್ಯ ಸರಕಾರ ಹೇಳಿದೆ. ಆ ಮೂಲಕ ಅಂಗನವಾಡಿ ಕೇಂದ್ರಗಳ ದುಸ್ಥಿತಿಯನ್ನು ಒಪ್ಪಿಕೊಂಡಿದೆ.

ಅಷ್ಟೇ ಅಲ್ಲದೆ, ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಹಣಕಾಸಿನ ಲಭ್ಯತೆ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಸಂಬಂಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಲಾದ ಲಿಖಿತ ಹೇಳಿಕೆಯಲ್ಲಿ ಸರಕಾರ ಮಾಹಿತಿ ನೀಡಿದೆ.

ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ‘ವಿದ್ಯುತ್‌ ಸಂಪರ್ಕ, ಶೌಚಾಲಯ ಕಟ್ಟಲು ಹಣ ಇಲ್ಲ ಎಂದು ಸ್ವತಃ ಸರಕಾರ ಒಪ್ಪಿಕೊಂಡಿರುವುದು ಅಶ್ಚರ್ಯದ ಸಂಗತಿ. ವಿದ್ಯುತ್‌ ಸಂಪರ್ಕ, ಶೌಚಾಲಯ ಇಲ್ಲದೇ ಅಂಗನವಾಡಿ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ?’ ಎಂಬುದು ಅಚ್ಚರಿಯ ಸಂಗತಿ ಎಂದು ಹೇಳಿತು.

ಸರಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೇಳಿ ವಿಚಾರಣೆಯನ್ನು ಜು.2ಕ್ಕೆ ಹೈಕೋರ್ಟ್ ಮುಂದೂಡಿತು. ರಾಜ್ಯದ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ 125 ಕೋಟಿ ರೂ.ಗಳನ್ನು 2021-22ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ 6,700 ಕೇಂದ್ರಗಳಿಗೆ ವಿದ್ಯುತ್‌ ಸಂಪರ್ಕ ಹಾಗೂ 8,300 ಕಟ್ಟಡಗಳಿಗೆ ಫ್ಯಾನ್‌ ಸೌಲಭ್ಯ ಮತ್ತು 1,700 ಅಂಗನವಾಡಿಗಳಿಗೆ ಶೌಚಾಲಯ ನಿರ್ಮಿಸಲಾಗುವುದು ಹಾಗೂ 771 ಹೊಸ ಅಂಗನವಾಡಿ ಕೇಂದ್ರ ನಿರ್ಮಿಸಲಾಗುವುದು.

ಹಣಕಾಸು ಇಲಾಖೆ ಒಪ್ಪಿಗೆ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರಕಾರ ಹೇಳಿದೆ. ಉಳಿದಂತೆ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್‌ ಸಂಪರ್ಕ, ಫ್ಯಾನ್‌, ಶೌಚಾಲಯ ಒದಗಿಸಲು ಪ್ರತ್ಯೇಕ ಅನುದಾನ ಇಲ್ಲ ಎಂದು ತಿಳಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *