2nd PUC Result 2021: ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕವೂ ಇಂದೇ ಘೋಷಣೆ?

ಬೆಂಗಳೂರು (ಜೂ. 28): ಕರ್ನಾಟಕದಲ್ಲಿ ಶಾಲಾ- ಕಾಲೇಜು ಪುನರಾರಂಭ ಮತ್ತು ಎಸ್ಎಸ್ಎಲ್​ಸಿ ಪರೀಕ್ಷೆಯ ವೇಳಾಪಟ್ಟಿಯ ಕುರಿತು ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಇದರ ಜೊತೆಗೆ, ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕ ಕೂಡ ಇಂದು ಪ್ರಕಟವಾಗಲಿದೆ. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು.

ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿ ಅಂಕಗಳನ್ನು ಮಾನದಂಡವನ್ನಾಗಿ ಪರಿಗಣಿಸಿ, ವೃತ್ತಿಪರ ಕೋರ್ಸ್​ಗೆ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಮಾತ್ರ ಪರಿಗಣಿಸುವುದಾಗಿ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ದಿನಾಂಕ ಇಂದು ಘೋಷಣೆಯಾಗುವುದು ಖಚಿತ ಎನ್ನಲಾಗುತ್ತಿದೆ. ಜೂನ್ ಅಂತ್ಯದ ವೇಳೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜುಲೈ 21ರಿಂದ 27ರೊಳಗೆ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ. ಒಂದು ಪರೀಕ್ಷೆ ನಂತರ ಎರಡು ದಿನ ಬಿಟ್ಟು ಪರೀಕ್ಷೆ ಮತ್ತೊಂದು ಪರೀಕ್ಷೆ ನಡೆಸಲಾಗುವುದು. ಎಸ್ಎಸ್ಎಲ್​ಸಿ ಪರೀಕ್ಷೆ ಹಾಗೂ ಶಾಲೆಗಳ ಆರಂಭಕ್ಕೆ ಮಹತ್ವದ ಸಭೆ ನಡೆಯಲಿದೆ.

ಶಾಲೆ ಪುನಾರಂಭ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ತಮ್ಮ ಇಲಾಖೆ ತಗೆದುಕೊಳ್ಳುತ್ತಿರುವ ತೀರ್ಮಾನದ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್ ಸಭೆ ನಡೆಸಲು ತೆರಳಿದ್ದಾರೆ. ಇಂದಿನ ಸಭೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇಂದು ಎಸ್ ಎಸ್ ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ ಮಾಡಲಿದ್ದೇವೆ. ಪರೀಕ್ಷೆ ವಿಚಾರವಾಗಿ ಇಂದು ಮಧ್ಯಾಹ್ನ ಸುದ್ದಿಗೋಷ್ಟಿಯಲ್ಲಿ ಘೋಷಣೆ ಮಾಡಲಾಗುವುದು. ಶಾಲೆ ಆರಂಭ ಹಾಗೂ ಪರೀಕ್ಷೆ ಪೂರ್ವ ತಯಾರಿ ಕುರಿತು  ವಿಕಾಸಸೌಧದಲ್ಲಿ ಇಂದು ಸಭೆ ನಡೆಯಲಿದೆ. ರಾಜ್ಯದ ಜಿಲ್ಲಾಧಿಕಾರಿ, ಸಿಇಓ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಇದೆ. ಸಭೆ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಶಾಲೆ ಆರಂಭ ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದು. ವಿದ್ಯಾಗಮ, ಭೌತಿಕ ತರಗತಿ ಕುರಿತು ಇನ್ನೂ ನಿರ್ಧಾರ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಶಾಲಾ ಕಾಲೇಜು ತೆರೆಯುವ ಕುರಿತು ಇಂದು ‌ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಶಾಲಾ ಕಾಲೇಜು ತೆರೆಯುವ ಕುರಿತು ಸಚಿವ ಸುರೇಶ್ ಕುಮಾರ್ ನಿರ್ಧಾರ ಕೈಗೊಳ್ಳುತ್ತಾರಾ? ಎಂಬ ಕುತೂಹಲ ಉಂಟಾಗಿದೆ. ಕಳೆದ 15 ತಿಂಗಳಿನಿಂದ ಕರ್ನಾಟಕದಲ್ಲಿ ಶಾಲಾ ಕಾಲೇಜುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಕೊರೋನಾದಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳನ್ನು ಓಪನ್ ಮಾಡಲು ಈಗಾಗಲೇ ತಜ್ಞರು ಕೆಲವು ಸಲಹೆಗಳನ್ನ ಕೊಟ್ಟಿದ್ದಾರೆ. ಶಾಲೆ ಪ್ರಾರಂಭಿಸುವುದಾದರೆ ಮಕ್ಕಳು ಮತ್ತು ಪೋಷಕರಿಗೆ ಕಡ್ಡಾಯವಾಗಿ ಕೊರೋನಾ ಲಸಿಕೆ ಹಾಕಿಸಬೇಕು, ಕೊರೋನಾ ಮಾರ್ಗಸೂಚಿ ಅಳವಡಿಸಿಕೊಂಡು ಶಾಲೆ ಪ್ರಾರಂಭಿಸಬಹುದು ಎಂದು ಸೂಚಿಸಲಾಗಿದೆ.

ಪೋಷಕ ಸಮನ್ವಯ ಸಮಿತಿಯಿಂದ ಭೌತಿಕ ತರಗತಿ ಪ್ರಾರಂಭಕ್ಕೆ ವಿರೋಧ ವ್ಯಕ್ತವಾಗಿದೆ. ನಗರ ಪ್ರದೇಶದ ಶಾಲೆಗಳನ್ನು ತೆರೆಯಲು ವಿರೋಧ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದ ಶಾಲೆಗಳ ಓಪನ್ ಮಾಡಲು ಒಪ್ಪಿಗೆ ನೀಡಲಾಗಿದೆ. ಅದರಲ್ಲೂ ಕಡಿಮೆ ಸಂಖ್ಯೆ ಶಾಲೆಗಳ ತೆರೆಯಲು ಪೋಷಕರು ಒಪ್ಪಿಗೆ ನೀಡಲಾಗಿದೆ. ಶಾಲೆಗಳನ್ನು ಪ್ರಾರಂಭಿಸುವಂತೆ ಖಾಸಗಿ ಶಾಲಾ ಒಕ್ಕೂಟಗಳಿಂದ ಒತ್ತಾಯ ಮಾಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *