18 ವರ್ಷಕ್ಕೆ ಮಗು ಕೊಟ್ಟು ಗಂಡ ಕೈಕೊಟ್ಟ: ಷರಬತ್ತು, ಐಸ್‌ಕ್ರೀಂ ಮಾರಿದ ಊರಿನಲ್ಲೇ ಇನ್ಸ್‌ಪೆಕ್ಟರ್‌ ಆದ ಕೇರಳದ ಯುವತಿ!

ಹೈಲೈಟ್ಸ್‌:

  • 18 ವರ್ಷಕ್ಕೆ ಆ್ಯನಿ ಸಿವಾಗೆ ಮಗು ಕೊಟ್ಟು ಎಸ್ಕೇಪ್‌ ಆಗಿದ್ದ ಪತಿ
  • ದಿಕ್ಕು ತೋಚದೆ ಶರಬತ್ತು ಅಂಗಡಿ ತೆರೆದಿದ್ದ ಆ್ಯನಿ ಸಿವಾ
  • ಕಷ್ಟಪಟ್ಟು ಓದಿ ಬಳಿಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಆದ ಯುವತಿ

ತಿರುವನಂತಪುರ: ಬದುಕಿನಲ್ಲಿ ಕಷ್ಟಗಳು ಎದುರಾದಾಗ ಆ ದಿನಗಳನ್ನು ಸವಾಲಾಗಿ ಸ್ವೀಕರಿಸಿದವರು ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚೇ ಸಾಧನೆ ಮಾಡಿರುತ್ತಾರೆ. ಅಂಥದ್ದೊಂದು ಸಾಧನೆಯ ಕತೆ ತಿರುವನಂತಪುರ ಜಿಲ್ಲೆಯ ವರ್ಕಳ ಎಂಬ ಪಟ್ಟಣದಿಂದ ಮೂಡಿಬಂದಿದೆ. ಅವರೇ ವರ್ಕಳದ ಪ್ರೊಬೆಷನರಿ ಸಬ್‌ ಇನ್ಸ್‌ಪೆಕ್ಟರ್‌ ಆ್ಯನಿ ಸಿವಾ.

ಹದಿನೆಂಟನೇ ವರ್ಷದಲ್ಲಿ ಮಗುವೊಂದರ ತಾಯಿಯಾಗಿದ್ದ ಅವರನ್ನು ಪತಿ ನಡು ರಸ್ತೆಯಲ್ಲಿ ಬಿಟ್ಟು ಹೋದ ಬಳಿಕ ಉಂಟಾದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು. ತಾವು ಬೀದಿ ಪಾಲಾಗಿದ್ದ ಊರಿಗೇ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಬಂದಿದ್ದಾರೆ. ಅವರ ಸಾಧನೆಯನ್ನು ಈಗ ಕೇರಳದ ಮಂದಿ ಕೊಂಡಾಡುತ್ತಿದ್ದಾರೆ.

ಆ್ಯನಿಯ ಕತೆಯೇನು?:
ಆ್ಯನಿ ಸಿವಾ ಅವರು ಮನೆಯವರ ವಿರೋಧವನ್ನು ಧಿಕ್ಕರಿಸಿ ಮದುವೆಯಾಗಿದ್ದವರು. ಆದರೆ, ಮಗು ಜನಿಸಿದ ಕೆಲವೇ ದಿನಗಳಲ್ಲಿ ಪತಿ ಅವರನ್ನು ತೊರೆದಿದ್ದ. ಅತ್ತ ಮನೆಯವರೂ ಇಲ್ಲದೆ, ಇತ್ತ ಪತಿಯ ಆಶ್ರಯವೂ ಇಲ್ಲದ ಆ್ಯನಿಯ ಬಾಳು ಬೀದಿ ಪಾಲಾಗಿತ್ತು. ದಿಕ್ಕು ತೋಚದೆ ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ್ದರು.

ಆದರೆ, ಸೋಲು ಒಪ್ಪಿಕೊಳ್ಳಲಿಲ್ಲ. ಶಿವಗಿರಿ ಆಶ್ರಮದಲ್ಲಿ ಅಂಗಡಿಯೊಂದನ್ನು ತೆರೆದು ಷರಬತ್ತು ಮತ್ತು ಐಸ್‌ಕ್ರೀಮ್‌ ಹಾಗೂ ಕರಕುಶಲ ವಸ್ತುಗಳನ್ನು ಮಾರಲು ಶುರು ಮಾಡಿದರು. ಅದು ಕೂಡ ಅವರಿಗೆ ಅನುಕೂಲಕರವಾಗಿರಲಿಲ್ಲ. ಆದರೆ, ಜೀವನ ಸಾಗುತ್ತಿತ್ತು. ಏತನ್ಮಧ್ಯೆ, ಷರಬತ್‌ ಸ್ಟಾಲ್‌ ನಷ್ಟಕ್ಕೆ ಒಳಗಾಯಿತು.

ಈ ವೇಳೆ ಪರಿಚಿತರೊಬ್ಬರು ಅವರ ನೆರವಿಗೆ ಬಂದರು. ಪೊಲೀಸ್‌ ಪರೀಕ್ಷೆ ಬರೆಯಲು ಆರ್ಥಿಕ ನೆರವಿನ ಜತೆಗೆ ಬೆಂಬಲವೂ ನೀಡಿದರು. ಪರೀಕ್ಷೆ ಬರೆದು ಪಾಸಾದ ಆ್ಯನಿ ಅವರು ಈಗ ಎಸ್‌ಐ ಆಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದಾರೆ. ಆ್ಯನಿ ಅವರ ನೇಮಕದ ಬಗ್ಗೆ ಕೇರಳ ಪೊಲೀಸ್‌ ಇಲಾಖೆ ಸಂತಸ ವ್ಯಕ್ತಪಡಿಸಿದೆ.

ಅವರು ಎಲ್ಲರಿಗೂ ಆದರ್ಶಪ್ರಾಯರು ಎಂದು ಟ್ವೀಟ್‌ ಮಾಡಿದೆ. ”ನಾನು ವರ್ಕಳಕ್ಕೆ ಎಸ್‌ಐ ಆಗಿ ಬರುತ್ತೇನೆಂಬ ಅರಿವು ಇರಲಿಲ್ಲ. ಯಾಕೆಂದರೆ ಒಂದು ಕಾಲದಲ್ಲಿ ನಾನು ಯಾರ ನೆರವೂ ಸಿಗದೆ ಈ ಪಟ್ಟಣದ ರಸ್ತೆಯಲ್ಲಿ ನಿಂತು ನೋವಿನಿಂದ ಕಣ್ಣೀರು ಸುರಿಸಿದ್ದೆ,” ಎಂದು ಆ್ಯನಿ ಸಂತಸ ವ್ಯಕ್ತಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *