SSLC Exam: ಶಿಕ್ಷಣ ಸಚಿವರ ಬೆಂಬಲಕ್ಕೆ ನಿಂತ ಸಿಎಂ ಯಡಿಯೂರಪ್ಪ; ಬೇರೆ ಕಡೆ ಇದ್ದೆ ಎಂದು ಸುಧಾಕರ್ ಯೂಟರ್ನ್
ಬೆಂಗಳೂರು(ಜೂ.29): ನಿನ್ನೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಘೋಷಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಹೇಳಿದ್ದ ಆರೋಗ್ಯ ಸಚಿವ ಸುಧಾಕರ್ ಇಂದು ಯೂಟರ್ನ್ ಹೊಡೆದಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಶಿಕ್ಷಣ ಸಚಿವರ ಪರ ನಿಂತ ಬಳಿಕ ಸುಧಾಕರ್ ತಮ್ಮ ವರಸೆ ಬದಲಾಯಿಸಿದ್ದಾರೆ. ನಿನ್ನೆ ನಾನು ಬೇರೆ ಸಭೆಯಲ್ಲಿ ಇದ್ದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿಎಂ ಬಳಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ನನ್ನ ಸಭೆ ಮುಗಿದ ಬಳಿಕ ಅವರು ಹೇಳಿದ್ದಾರೆ. ತಾಂತ್ರಿಕ ಸಲಹಾ ಸಮಿತಿಯವರ ಜೊತೆ ಮಾತನಾಡಿದ್ದಾರೆ ಅನ್ಸುತ್ತೆ. ನಾನು ಸಂಜೆ ಹೊತ್ತಿಗೆ ಅವರ ಜೊತೆಗೆ ಮಾತನಾಡಿದ್ದೇನೆ. ತಜ್ಞರು ಮತ್ತು ಮಂತ್ರಿಗಳು ಮಾತನಾಡಿದ್ದಾರೆ ಅದನ್ನು ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಹೇಳಿದರು. ಆ ಮೂಲಕ ಸಚಿವರ ನಡುವೆ ಸಮನ್ವಯ ಕೊರತೆ ಎದ್ದುಕಾಣುತ್ತಿದೆ ಎಂದು ಕೇಳಿ ಬಂದಿದ್ದ ಮಾತಿಗೆ ತೇಪೆ ಹಾಕಲು ಯತ್ನಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಈ ವಿಚಾರವಾಗಿ ಸಿಎಂ ಜೊತೆ ಮಾತನಾಡಿದ್ದೆ ಅಂತ ಸುರೇಶ್ ಕುಮಾರ್ ಅವರು ತಿಳಿಸಿದ್ರು. ನಾನು ನಿನ್ನೆ ನಮ್ಮ ಇಲಾಖೆಯ ಸಭೆಯಲ್ಲಿದ್ದೆ. ಸಭೆ ಆದ ಮೇಲೆ ಅವರು ಹೇಳಿದ್ದಾರೆ. ಪರೀಕ್ಷೆ ಬಗ್ಗೆ ತಜ್ಞರು ಮತ್ತು ಮಂತ್ರಿಗಳು ಮಾತನಾಡಿದ್ದಾರೆ ಎಂದರು.
ಇನ್ನು, ಸಿಎಂ ಬಿಎಸ್ ಯಡಿಯೂರಪ್ಪ ಪರೀಕ್ಷೆ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಟ್ವೀಟ್ ಮಾಡಿರುವ ಅವರು, ಶಿಕ್ಷಣ ಸಚಿವ ಸುರೇಶ್ ಅವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, SSLC ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ ನಂತರವೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ ಇದೇನು ಏಕಪಕ್ಷೀಯ ತೀರ್ಮಾನವಲ್ಲ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ ಎಂದು ಪರಿಕ್ಷೆ ಗೊಂದಲದ ಬಗ್ಗೆ ಸಿಎಂ ಬಿಎಸ್ವೈ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬಳಿಕ ಎಚ್ಚೆತ್ತುಕೊಂಡ ಆರೋಗ್ಯ ಸಚಿವ ಸುಧಾಕರ್, ನಾನು ನಿನ್ನೆ ನಮ್ಮ ಇಲಾಖೆಯ ಸಭೆಯಲ್ಲಿದ್ದೆ. ಶಿಕ್ಷಣ ಸಚಿವರು ಸಿಎಂ ಜೊತೆ ಚರ್ಚೆ ನಡೆಸಿದ್ದಾರಂತೆ ಎಂದು ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾರೆ.
ಸಚಿವರು ನಿನ್ನೆ ಹೇಳಿದ್ದೇನು?
ನಿನ್ನೆ ಆರೋಗ್ಯ ಸಚಿವ ಕೆ.ಸುಧಾಕರ್ 10ನೇ ತರಗತಿ ಪರೀಕ್ಷೆ ಘೋಷಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು. ಸಚಿವ ಸುರೇಶ್ ಕುಮಾರ್ ಘೋಷಣೆ ನಂತರ ಪ್ರತಿಕ್ರಿಯೆ ನೀಡಿದ್ದ ಅವರು, ಶಿಕ್ಷಣ ಸಚಿವರಾಗಲಿ ಮತ್ತೊಬ್ಬರಾಗಲಿ ನನ್ನ ಜೊತೆ ಈ ಬಗ್ಗೆ ಚರ್ಚಿಸಿಲ್ಲ. ನನ್ನ ಗಮನಕ್ಕೆ ಇದು ಬಂದೇ ಇಲ್ಲ ಎಂದು ಹೇಳಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಘೋಷಣೆ ನಂತರ ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ. ಶಿಕ್ಷಣ ಸಚಿವರಿಗೆ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಕೊಟ್ಟಿದ್ದರ ಬಗ್ಗೆಯೂ ಗೊತ್ತಿಲ್ಲ ಎಂದು ಶಿಕ್ಷಣ ಸಚಿವರ ನಡೆಗೆ ಸುಧಾಕರ್ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದರು.
ಇನ್ನು, ಲಸಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್, ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ಈ ತಿಂಗಳು ಮತ್ತಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ. ಕೇಂದ್ರ ಸರ್ಕಾರ ಕಳುಹಿಸಲು ಮುಂದಾಗಿದೆ. ಈ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದೇನೆ. ಅವರಲ್ಲಿ ಬೇಡಿಕೆ ಇಟ್ಟು, ರಾಜ್ಯಕ್ಕೆ ಹೆಚ್ಚಿನ ಲಸಿಕೆ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.
ಮುಂದುವರೆದ ಅವರು, ಇಂದು ಮೈಸೂರು, ಕೊಡಗು, ಬೆಳ್ತಂಗಡಿ ಪ್ರವಾಸ ಹೋಗುತ್ತಿದ್ದೇನೆ. ರಾಜ್ಯದಲ್ಲಿ ಎರಡು ಜಿಲ್ಲೆಯಲ್ಲಿ ಹೆಚ್ಚು ಪಾಸಿಟಿವಿಟಿ ದರ ಇದೆ ಹಾಗೂ ಸಾವು ಕೂಡ ಹೆಚ್ಚಿದೆ. ಸಮಾಲೋಚನೆ ಮತ್ತು ಸಭೆ ಮಾಡುತ್ತೇನೆ. ಬೆಳ್ತಂಗಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಮಾಡಲಿದ್ದೇನೆ ಎಂದರು.