Karnataka Weather Today: ಮತ್ತೆ ವರುಣನ ಆರ್ಭಟ; ಜು. 5ರವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ
Karnataka Monsoon 2021: ಬೆಂಗಳೂರು (ಜುಲೈ 2): ಕಳೆದ ಒಂದು ವಾರದಿಂದಲೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ರಾಯಚೂರು ಭಾಗದಲ್ಲಿ ಭಾರೀ ಮಳೆಯಾಗಿತ್ತು. ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಇನ್ನೂ ಮಳೆ ಮುಂದುವರೆದಿದ್ದು, ಜುಲೈ 5ರವರೆಗೂ ವರುಣನ ಆರ್ಭಟ ಮುಂದುವರೆಯುವ ಸಾಧ್ಯತೆಯಿದೆ.
ಕರಾವಳಿ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಿಂದ ಮಳೆಯಿಂದ ಹಳದಿ ಅಲರ್ಟ್ ಘೋಷಿಸಲಾಗಿತ್ತು. ಇನ್ನೆರಡು ದಿನ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲೂ ಜುಲೈ 5ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.
ಮೂರ್ನಾಲ್ಕು ದಿನಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿತ್ತು. ಈ ಭಾಗದಲ್ಲಿ ಇಂದಿನಿಂದ ಮಳೆ ಕೊಂಚ ಕಡಿಮೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿಯೂ ಇನ್ನು 4 ದಿನ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಉತ್ತರ ಒಳನಾಡಿನಲ್ಲಿ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇರಲಿದೆ. ಸಂಜೆಯ ಬಳಿಕ ಮಳೆಯಾಗುವ ಸಾಧ್ಯತೆಯಿದೆ. ನೈಋತ್ಯ ಮುಂಗಾರು ದುರ್ಬಲವಾದ್ದರಿಂದ ಕರಾವಳಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಮಲೆನಾಡಿನಲ್ಲೂ ಮಳೆಯಾಗಲಿದ್ದು, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 5ರವರೆಗೆ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಕೂಡ ಇಂದು ಹಗುರ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ನೆರೆಯ ರಾಜ್ಯಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕರ್ನಾಟಕದಲ್ಲೂ ಮಳೆ ಹೆಚ್ಚಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ಒಡಿಶಾ, ಭುವನೇಶ್ವರದಲ್ಲಿ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಭುವನೇಶ್ವರದ ಅನೇಕ ಕಡೆ ರಸ್ತೆಗಳು ಬಂದ್ ಆಗಿದ್ದು, ನದಿ ತೀರದ ಗ್ರಾಮಗಳಿಗೂ ನೀರು ನುಗ್ಗಿದೆ. ಇಷ್ಟೇ ಅಲ್ಲದೆ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್ ರಾಜ್ಯಗಳಲ್ಲೂ ಇನ್ನೆರಡು ದಿನ ಮಳೆಯಾಗಲಿದೆ.
ಇಂದು ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯದಲ್ಲಿ ವಿಪರೀತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬೈ, ಮೇಘಾಲಯದಲ್ಲಿ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ರಸ್ತೆಗಳು ಕೆರೆಗಳಂತಾಗಿವೆ. ಮೇಘಾಲಯದಲ್ಲಿ ಮಳೆಗೆ ಸೇತುವೆಗಳೇ ಕೊಚ್ಚಿಕೊಂಡು ಹೋಗಿವೆ. ದೆಹಲಿಯಲ್ಲಿ ನಿನ್ನೆಯಿಂದ ಮಳೆಯಾಗುತ್ತಿದ್ದು, ಬಿಸಿಲಿನಿಂದ ಕಾದ ನೆಲಕ್ಕೆ ತಂಪೆರೆದಿದೆ.