Karnataka Unlock 3.0: ಸೋಮವಾರದಿಂದ ಕರ್ನಾಟಕ ಸಂಪೂರ್ಣ ಅನ್ಲಾಕ್?; ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
ಬೆಂಗಳೂರು (ಜು. 3): ರಾಜ್ಯದಲ್ಲಿ ಕೊರೋನಾವೈರಸ್ ಅಟ್ಟಹಾಸ ಕೊಂಚ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ, ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಲಾಕ್ಡೌನ್ ತೆರವುಗೊಳಿಸಲಾಗಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ನಿರ್ಬಂಧಗಳನ್ನು ಹೇರಲಾಗಿದ್ದು, ನೈಟ್ ಕರ್ಫ್ಯೂ (Night Curfew), ವೀಕೆಂಡ್ ಕರ್ಫ್ಯೂ (Weekend Curfew) ಮುಂತಾದ ನಿಯಮಗಳು ಇನ್ನೂ ಜಾರಿಯಲ್ಲಿವೆ. ರಾಜ್ಯ ಸರ್ಕಾರ ಸೋಮವಾರದಿಂದ 3ನೇ ಹಂತದ ಅನ್ಲಾಕ್ (Unlock 3.0) ಪ್ರಕ್ರಿಯೆಗೆ ಚಿಂತನೆ ನಡೆಸಿದ್ದು, ಈ ಬಗ್ಗೆ ಇಂದು ನಿರ್ಧಾರವಾಗುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಮೂರನೇ ಹಂತದ ಲಾಕ್ಡೌನ್ ಸಡಿಲಿಕೆ (Lockdown Relaxation) ಕುರಿತು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (CM BS Yediyurappa) ಸಭೆ ನಡೆಸಲಿದ್ದಾರೆ. ಅನ್ಲಾಕ್ (Karnataka Unlock 3.0) ಬಗ್ಗೆ ಚರ್ಚೆ ನಡೆಸಲು ಸಚಿವರ ಜೊತೆ ನಿನ್ನೆ ಸಂಜೆ ಸಿಎಂ ಸಭೆ ನಿಗದಿಯಾಗಿತ್ತು. ಆದರೆ, ಆ ಸಭೆಯನ್ನು ಇಂದಿಗೆ ಮುಂದೂಡಲಾಗಿದೆ. ಇಂದು ಅನ್ಲಾಕ್ 3.0 ಬಗ್ಗೆ ಕೊರೋನಾ ಉಸ್ತುವಾರಿ ಸಚಿವರು, ಹಿರಿಯ ಸಚಿವರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಜೊತೆಗೆ ಬ್ಲಾಕ್ ಫಂಗಸ್, ವೈಟ್ ಫಂಗಸ್, ಡೆಲ್ಟಾ ಪ್ಲಸ್ ಮುಂತಾದ ಇತರೆ ರೋಗಗಳು ಕೂಡ ಪತ್ತೆಯಾಗುತ್ತಿವೆ. ಈಗಾಗಲೇ 2 ಹಂತದ ಲಾಕ್ಡೌನ್ ತೆರವುಗೊಳಿಸಲಾಗಿದ್ದು, ಸರ್ಕಾರಿ ಬಸ್ ಸಂಚಾರ, ರೆಸ್ಟೋರೆಂಟ್, ಕಚೇರಿಗಳು, ಬಾರ್ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಜುಲೈ 5ರಿಂದ ರಾಜ್ಯದಲ್ಲಿ ಸಂಪೂರ್ಣ ಅನ್ಲಾಕ್ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಇಂದಿನ ಸಭೆಯ ಬಳಿಕ ನಿರ್ಧಾರವಾಗಲಿದೆ. ಸೋಮವಾರದಿಂದ ಕರ್ನಾಟಕದಲ್ಲಿ ಸಂಪೂರ್ಣವಾಗಿ ಲಾಕ್ಡೌನ್ ತೆರವುಗೊಳಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಆದರೆ, ಕೊರೋನಾ ತಜ್ಞರ ಸಮಿತಿ, ನೆರೆಯ ರಾಜ್ಯಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಕರ್ನಾಟಕದಲ್ಲಿ ಸಂಪೂರ್ಣವಾಗಿ ಅನ್ಲಾಕ್ ಘೋಷಿಸಿದರೆ ಮುಂದೆ ಮತ್ತೆ ಕೊರೋನಾ ಹೆಚ್ಚಾಗುವ ಸಾಧ್ಯತೆಯಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗಳನ್ನಾದರೂ ಮುಂದುವರೆಸುವುದು ಉತ್ತಮ. ಹಾಗೇ, ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸೋಮವಾರದಿಂದ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶ, ಮಾಲ್ ಓಪನ್, ಮಾರುಕಟ್ಟೆಗಳು ಓಪನ್, ಪಬ್, ಕ್ಲಬ್ ತೆರೆಯಲು ಅವಕಾಶ, ಜಿಮ್, ತೆರೆಯಲು ಅನುಮತಿ ನೀಡುವ ಸಾಧ್ಯತೆಯಿದೆ.