ಸಾಯುತ್ತೇನೆ, ಆದರೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಜೈಲಿನಿಂದ ಹೊರಬಂದ ಬಳಿಕ ಲಾಲೂ ಮೊದಲ ಮಾತು
ಹೈಲೈಟ್ಸ್:
- ದಿಲ್ಲಿಯ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಲಾಲೂ ಪ್ರಸಾದ್
- ಮಗ ತೇಜಸ್ವಿ ಯಾದವ್ ಆರ್‌ಜೆಡಿ ದೋಣಿಯನ್ನು ಚೆನ್ನಾಗಿ ನಡೆಸುತ್ತಿದ್ದಾನೆ
- ಏನೇ ಬಂದರೂ ಎನ್‌ಡಿಎ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ
ಹೊಸದಿಲ್ಲಿ: ಬಿಹಾರದಲ್ಲಿನ ನಿತೀಶ್ ಕುಮಾರ್ ಅವರ ಎನ್‌ಡಿಎ ಸರಕಾರ ವಿರುದ್ಧದ ತಮ್ಮ ಹೋರಾಟದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ
ಲಾಲೂ ಪ್ರಸಾದ್ ಯಾದವ್ ಶಪಥ ಮಾಡಿದ್ದಾರೆ. ಮೇವು ಹಗರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಲಾಲೂ ಮಾತನಾಡಿದ್ದಾರೆ.
ತಾವು ಬದುಕಿರುವುದು ಮಗ ತೇಜಸ್ವಿ ಯಾದವ್ ಕಾರಣದಿಂದ ಎಂದಿರುವ ಲಾಲೂ, ಕಳೆದ ವರ್ಷ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನೆಡೆಸಿದ ರೀತಿಗಾಗಿ ಮಗನನ್ನು ಶ್ಲಾಘಿಸಿದರು.
‘ಪ್ರಾಮಾಣಿಕವಾಗಿ ಹೇಳುತ್ತೇನೆ. ನಾನು ಆತನಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಆತ ಆರ್‌ಜೆಡಿಯ ದೋಣಿಯನ್ನು ಸುರಕ್ಷಿತವಾಗಿ ನಡೆಸುತ್ತಿದ್ದಾನೆ. ಆರ್‌ಜೆಡಿಗೆ ಉಜ್ವಲ ಭವಿಷ್ಯವಿದೆ. ಆದರೆ ರಾಬ್ಡಿ ದೇವಿ ಮತ್ತು ತೇಜಸ್ವಿ ಅವರು ಇಲ್ಲದಿದ್ದರೆ ರಾಂಚಿಯಲ್ಲಿಯೇ ನಾನು ನಾಶವಾಗಿ ಹೋಗುತ್ತಿದ್ದೆ’ ಎಂದು ಲಾಲೂ ಹೇಳಿದ್ದಾರೆ.
ತಮ್ಮ ಹಾಗೂ ರಾಬ್ಡಿ ದೇವಿ ಅವರ ಆಳ್ವಿಕೆ ಅವಧಿಯನ್ನು ‘ಜಂಗಲ್ ರಾಜ್’ ಎಂದು ಕರೆಯುತ್ತಿದ್ದ ನಿತೀಶ್ ಕುಮಾರ್ ಮತ್ತು ಇತರ ಟೀಕಾಕಾರರ ವಿರುದ್ಧ ಹರಿಹಾಯ್ದ ಲಾಲೂ, ಬಡವರು ಮತ್ತು ದುರ್ಬಲ ವರ್ಗದವರು ಮತಗಟ್ಟೆಗೆ ತಲುಪುವಂತೆ ನೋಡಿಕೊಂಡಿದ್ದೆವು. ಆದರೆ ವಿರೋಧಿಗಳು, ಬಡವರು ತಮ್ಮ ಹಕ್ಕು ಚಲಾಯಿಸುವುದಕ್ಕೆ ಕೋಪಗೊಂಡಿದ್ದರು. ಈ ಶಕ್ತಿಗಳ ವಿರುದ್ಧ ಏನೇ ಬಂದರೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮೇವು ಹಗರಣದಲ್ಲಿ 2017ರ ಡಿಸೆಂಬರ್ ತಿಂಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಲಾಲೂ, ಈ ಶಿಕ್ಷೆಯ ಅವಧಿಯ ಬಹುಪಾಲು ಸಮಯವನ್ನು ಅನಾರೋಗ್ಯದ ಕಾರಣ ಜಾರ್ಖಂಡ್‌ನ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ ಸಂಸ್ಥೆಯಲ್ಲಿ ಕಳೆದಿದ್ದರು.
ದಿಲ್ಲಿಯಲ್ಲಿ ಇರುವ ಮಗಳು ಮಿಸಾ ಭಾರ್ತಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಲಾಲೂ, ಕೇಂದ್ರ ಹಾಗೂ ಬಿಹಾರದಲ್ಲಿನ ಎನ್‌ಡಿಎ ಸರಕಾರಗಳ ವಿರುದ್ಧ ಕಿಡಿಕಾರಿದರು.