ವರಿಷ್ಠರಿಂದ ಬುಲಾವ್‌? ದಿಢೀರ್ ದೆಹಲಿಯತ್ತ ಮುರುಗೇಶ್ ನಿರಾಣಿ

ಹೈಲೈಟ್ಸ್‌:

  • ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮಂಗಳವಾರ ದಿಢೀರ್
  • ಕುತೂಹಲ ಕೆರಳಿಸಿದ ಮುರುಗೇಶ್ ನಿರಾಣಿ ದಿಢೀರ್ ದೆಹಲಿ ಪ್ರವಾಸ
  • ವರಿಷ್ಠರ ಬುಲಾವಿನ ಹಿನ್ನೆಲೆಯಲ್ಲಿ ಮುರುಗೇಶ್ ನಿರಾಣಿ ದೆಹಲಿಗೆ?

ಬೆಂಗಳೂರು: ಸಚಿವ ಮುರುಗೇಶ್ ನಿರಾಣಿ ದಿಢೀರ್ ಆಗಿ ದೆಹಲಿಗೆ ತೆರಳುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಿನ್ನೆಲೆಯಲ್ಲಿ ನಿರಾಣಿ

ದೆಹಲಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದು ಕೇಂದ್ರದ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸಿಎಂ ಸ್ಥಾನ ಬದಲಾವಣೆಯಾದರೆ ಮುರುಗೇಶ್ ನಿರಾಣಿಗೂ ಅವಕಾಶ ನೀಡಬಹುದು ಎಂದು ವಿಧಾನಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿರಾಣಿ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.

ದೆಹಲಿ ದಿಢೀರ್‌ ಭೇಟಿ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳ ಪ್ರವಾಸವನ್ನು ಮುರುಗೇಶ್ ನಿರಾಣಿ ರದ್ದುಗೊಳಿಸಿದ್ದಾರೆ. ಸೋಮವಾರ ರಾತ್ರಿಯೇ ಬೆಂಗಳೂರು ಆಗಮಿಸಿದ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಕೆಲವು ವರಿಷ್ಠ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಇಂದೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಸಾಧ್ಯತೆ

ಮುರುಗೇಶ್ ನಿರಾಣಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆಗಳು ಇವೆ. ಇತ್ತೀಚೆಗಷ್ಟೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿ ಮೂರು ದಿನಗಳ ಕಾಲ ಸಭೆ ನಡೆಸಿದ್ದರು. ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾರೂ ಕೂಡಾ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದರು. ಅಲ್ಲದೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಹೀಗಿದ್ದರೂ ನಾಯಕತ್ವ ಬದಲಾವಣೆ ಕುರಿತಾಗಿ ಸಚಿವರಾದ ಸಿಪಿ ಯೋಗೀಶ್ವರ್‌, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ಸಿಎಂ ಬದಲಾವಣೆ ಆಗದೆ ಇದ್ದರೆ ಬಿಜೆಪಿಗೆ ಉಳಿಗಾಲವಿಲ್ಲ’ ಎಂದು ಯತ್ನಾಳ್ ಮತ್ತೆ ಗುಡುಗಿದ್ದಾರೆ. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಚಿವ ಮುರುಗೇಶ್ ನಿರಾಣಿಗೆ ವರಿಷ್ಠರಿಂದ ಬುಲಾವ್ ಬಂದಿದ್ದು ಸಹಜವಾಗಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *