ಕೇಂದ್ರ ಸಂಪುಟ ವಿಸ್ತರಣೆ: ಸಚಿವರ ಜತೆಗಿನ ಪ್ರಧಾನಿ ಮೋದಿ ಸಭೆ ರದ್ದು

ಹೈಲೈಟ್ಸ್‌:

  • ಇನ್ನು ಎರಡು ದಿನಗಳಲ್ಲಿ ಕೇಂದ್ರ ಸಂಪುಟ ವಿಸ್ತರಣೆಯ ಅಂತಿಮ ತೀರ್ಮಾನ
  • ಅಮಿತ್ ಶಾ ಮತ್ತು ಬಿಎಲ್ ಸಂತೋಷ್ ಜತೆ ಸೋಮವಾರ ಚರ್ಚಿಸಿದ ಪ್ರಧಾನಿ
  • ಪಕ್ಷದ ಹಿರಿಯ ಸಚಿವರ ಜತೆಗಿನ ಮಂಗಳವಾರದ ಸಭೆ ರದ್ದು

ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತಾದ ಊಹಾಪೋಹಗಳ ನಡುವೆ ಮಂಗಳವಾರ ಸಂಜೆ 5 ಗಂಟೆಗೆ ಹಿರಿಯ ಸಚಿವರು ಮತ್ತು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯನ್ನು ರದ್ದುಗೊಳಿಸಲಾಗಿದೆ.

ಸಚಿವರ ಕಾರ್ಯದಕ್ಷತೆ ಮತ್ತು ಭವಿಷ್ಯದ ಯೋಜನೆಗಳ ಪ್ರಸ್ತಾವನೆಗಳ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಲ್ಹಾದ್ ಜೋಷಿ, ಪಿಯೂಷ್ ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೂ ಮುನ್ನ ಸೋಮವಾರ, ಪ್ರಧಾನಿ ಮೋದಿ ಅವರು ಅಮಿತ್ ಶಾ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಇದು ಸಂಪುಟ ವಿಸ್ತರಣೆ ಕುರಿತಾದ ಸುದೀರ್ಘ ಚಟುವಟಿಕೆಗಳಿಗೆ ಅಂತಿಮ ಸ್ಪರ್ಶ ನೀಡುವ ಉದ್ದೇಶದ ಸಭೆ ಎನ್ನಲಾಗಿದೆ.

ಜೂನ್ 20ರಿಂದಲೂ ಪ್ರಧಾನಿ ಮೋದಿ, ವಿವಿಧ ಸಚಿವಾಲಯಗಳ ಕಾರ್ಯವೈಖರಿ, ಪ್ರದರ್ಶನಗಳ ಪರಾಮರ್ಶನಾ ಸಭೆಗಳನ್ನು ನಡೆಸಿದ್ದರು. ಸಂಪುಟ ವಿಸ್ತರಣೆಗೆ ಈಗಾಗಲೇ ಪೂರ್ವಭಾವಿ ತಯಾರಿಗಳು ಪೂರ್ಣಗೊಂಡಿವೆ. 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿ ಸಂಪುಟ ವಿಸ್ತರಣೆ ಚಟುವಟಿಕೆ ನಡೆಯುತ್ತಿದೆ. ಒಟ್ಟು 28 ಸಚಿವ ಸ್ಥಾನಗಳು ಖಾಲಿ ಇದ್ದು, ಇದರಲ್ಲಿ ಕನಿಷ್ಠ 18 ಸ್ಥಾನ ಭರ್ತಿಯಾಗುವ ನಿರೀಕ್ಷೆಯಿದೆ. ಜುಲೈ 7 ಅಥವಾ 8ರಂದು ಸಂಪುಟ ವಿಸ್ತರಣೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *