Laxman Savadi son Accident: ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಬೈಕ್ಗೆ ಡಿಕ್ಕಿ, ಸವಾರ ಸಾವು!
ಹೈಲೈಟ್ಸ್:
- ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಬೈಕ್ಗೆ ಡಿಕ್ಕಿ
- ಅಪಘಾತದ ಪರಿಣಾಮಕ್ಕೆ ಸವಾರ ಆಸ್ಪತ್ರೆಯಲ್ಲಿ ಸಾವು
- ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿ ಘಟನೆ
DCM Laxman Savadi: ಬಾಗಲಕೋಟೆ: ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಕಾರ್ ಅಪಘಾತಕ್ಕೆ ಒಳಗಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕೊಡ್ಲೆಪ್ಪ ಬೋಳಿ ಮೃತ ಬೈಕ್ ಸವಾರ. ಕುಡ್ಲೆಪ್ಪ ಹೊಲದಿಂದ ಮನೆಗೆ ಹಿಂದಿರುಗುವಾಗ ಹಿಂಬದಿಯಿಂದ ಬಂದು ಡಿಸಿಎಂ ಪುತ್ರನ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಕಾರ್ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಕೂಡ್ಲೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೂಡ್ಲೆಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದ ನಡೆದ ಬಳಿಕ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ್ ಬೇರೆ ಕಾರಿನ ಮೂಲಕ ಪರಾರಿಯಾಗಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಸ್ಥಳೀಯರು ಅವಕಾಶ ನೀಡದೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್ನು ಅಪಘಾತ ನಡೆದ ಸ್ಥಳದಲ್ಲಿ ಚಿದಾನಂದ್ ಸವದಿಯನ್ನು ಕೆಲಹೊತ್ತು ಹಿಡಿದಿಟ್ಟಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ನಾನು ಡಿಸಿಎಂ ಲಕ್ಷ್ಮಣ್ ಸವದಿ ಮಗ ಅಂತ ಅವಾಜ್ ಹಾಕಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ. ಇಲಕಲ್ನಿಂದ ವಿಜಯಪುರಕ್ಕೆ ಡಿಸಿಎಂ ಪುತ್ರ ತೆರಳುತ್ತಿದ್ದರು
ಧಮ್ಕಿ ಹಾಕಿದ್ರಾ ಚಿದಾನಂದ್?
ಕಾರ್ ನಲ್ಲಿದ್ದ ಚಿದಾನಂದ, ಕಾರಿನ ನಂಬರ್ ಪ್ಲೇಟ್ ಕಿತ್ತು ಹಾಕಿದ್ದು, ನಂತರ ಗ್ರಾಮಸ್ಥರು ತೆಗೆದಿದ್ದ ಫೋಟೊ ಗಳನ್ನು ಮೊಬೈಲ್ ನಿಂದ ಡಿಲೀಟ್ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿದಾನಂದ ‘ ನಾನು ಕಾರ್ ಚಲಾಯಿಸುತ್ತಿರಲಿಲ್ಲ, ಡ್ರೈವರ್ ಚಲಾಯಿಸುತ್ತಿದ್ದರು’ ಎಂದಿದ್ದಾರೆ. ಕಾರ್ ಚಾಲಕ ಹನುಮಂತ್ ಸಿಂಗ್ ವಿರುದ್ಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.