ಮಾಜಿ ಸಿಎಂ ಹೆಚ್ಡಿಕೆ ಮಾಧ್ಯಮ ಕಾರ್ಯದರ್ಶಿ ಕೆ.ಸಿ. ಸದಾನಂದ ನಿಧನ

ಬೆಂಗಳೂರು,ಜು.6- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಕೆ.ಸಿ.ಸದಾನಂದ(49) ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಅಸ್ವಸ್ಥರಾಗಿದ್ದ ಸದಾನಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ತಂದೆ, ಪತ್ನಿ, ಪುತ್ರ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೆಲಗೆರೆ ಗ್ರಾಮದವರಾದ ಸದಾನಂದ ಸಂಜೆವಾಣಿ, ಈ ಸಂಜೆ, ಕನ್ನಡಪ್ರಭ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.ಸ್ನೇಹಜೀವಿಯಾಗಿದ್ದ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಕೆಲವು ವರ್ಷಗಳಿಂದ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪತ್ನಿಗೆ ಉದ್ಯೋಗ: ಸದಾನಂದ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸದಾನಂದ ಅವರ ಪತ್ನಿಗೆ ಕಸ್ತೂರಿ ಚಾನಲ್‍ನಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಅವರ ಪುತ್ರನ ವಿದ್ಯಾಭ್ಯಾಸ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.ಕಳೆದ 13 ವರ್ಷಗಳಿಂದಲೂ ಅವರೊಂದಿಗೆ ಒಡನಾಟವಿತ್ತು. ಕುಟುಂಬದ ಸದಸ್ಯನನ್ನು ಕಳೆದುಕೊಂಡಷ್ಟು ನೋವಾಗಿದೆ. ಅವರು ಪತ್ರಕರ್ತರು ಮಾತ್ರವಲ್ಲ. ವಿಮರ್ಶಕರೂ ಆಗಿದ್ದರು. ದೀರ್ಘಕಾಲದ ನನ್ನ ಒಡನಾಡಿ, ಹಿರಿಯ ಪತ್ರಕರ್ತ, ತಮ್ಮ ಮಾಧ್ಯಮ ಕಾರ್ಯದರ್ಶಿ ಆಗಿದ್ದ ಕೆ.ಸಿ.ಸದಾನಂದ ಅವರು ನಿಧನ ತುಂಬ ನೋವುಂಟು ಮಾಡಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂತಹ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆ ಹೊಂದಿದ್ದರು. ಅವರ ಕುಟುಂಬದ ನೋವು ನನ್ನದೂ ಆಗಿದ್ದು, ಸದಾನಂದ ನಿರ್ಗಮಿಸಿದ್ದರೂ ಸದಾ ನೆನಪಿನಲ್ಲಿರುತ್ತೀರಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮೃತರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ಸಚಿವರಾದ ಕೆ.ಎಸ್.ಈಶ್ವರಪ್ಪ , ಬೆಂಗಳೂರು ವರದಿಗಾರರ ಕೂಟ, ಬೆಂಗಳೂರು ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *