ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿರುವವರಿಗೂ ಲಸಿಕೆ ನೀಡಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಹೈಲೈಟ್ಸ್:
- ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿರುವವರಿಗೂ ಲಸಿಕೆ ನೀಡಿ
- ಮಾನಸಿಕ ಅಸ್ವಸ್ಥರ ಬಗ್ಗೆ ಸರ್ಕಾರಗಳು ಹೆಚ್ಚು ನಿಗಾ ವಹಿಸಬೇಕು
- ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಹೊಸದಿಲ್ಲಿ: ದೇಶಾದ್ಯಂತ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಕೇಂದ್ರಗಳಲ್ಲಿರುವವರನ್ನು ಕೊರೊನಾ ತಪಾಸಣೆಗೆ ಒಳಪಡಿಸಿ, ಮುಂಜಾಗ್ರತೆ ಕ್ರಮವಾಗಿ ಕೊರೊನಾ ನಿರೋಧಕ ಲಸಿಕೆಯನ್ನು ನೀಡುವ ಬಗ್ಗೆ ಗಮನಹರಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಮಹಾರಾಷ್ಟ್ರ ಸರಕಾರವು ಮಾನಸಿಕ ಚಿಕಿತ್ಸೆ ಕೇಂದ್ರಗಳಲ್ಲಿನ ರೋಗಿಗಳನ್ನು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸುತ್ತಿರುವ ವಿರುದ್ಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯಪಟ್ಟಿದೆ. ನ್ಯಾ. ಡಿ.ವೈ. ಚಂದ್ರಚೂಡ್ ಹಾಗೂ ನ್ಯಾ.ಎಂ.ಆರ್. ಷಾ ಅವರಿದ್ದ ನ್ಯಾಯಪೀಠವು, ಕೂಡಲೇ ವರ್ಗಾವಣೆ ನಿಲ್ಲಿಸಿ. ಈ ಕ್ರಮ ಮಾನಸಿಕ ಚಿಕಿತ್ಸೆ ಕಾಯಿದೆಯ ಉಲ್ಲಂಘನೆ ಆಗಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜು.12ರಂದು ನಡೆಸುತ್ತಿರುವ ಮಹತ್ವದ ಸಭೆಯಲ್ಲಿ ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಸಿಬ್ಬಂದಿ ಸಹಕಾರ ನೀಡಬೇಕು ಎಂದು ಹೇಳಿದೆ.
ಅಲ್ಲದೇ, ಮಾನಸಿಕ ಚಿಕಿತ್ಸೆ ಪೂರ್ಣಗೊಂಡಿದ್ದರೂ ಕೇಂದ್ರಗಳಲ್ಲಿಯೇ ಉಳಿದಿರುವವರು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರ ನಿಖರ ಮಾಹಿತಿಯನ್ನು ರಾಜ್ಯ ಸರಕಾರಗಳು ದಾಖಲಿಸಬೇಕು. ಇನ್ನು ಮೂರು ವಾರಗಳ ನಂತರ ಈ ಪ್ರಕರಣ ಸಂಬಂಧ ಮತ್ತೆ ವಿಚಾರಣೆ ನಡೆಸಲಾಗುವುದು. ಆ ವೇಳೆಗೆ ಮಾನಸಿಕ ಅಸ್ವಸ್ಥರ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ನಿರ್ದೇಶಿಸಿದೆ.
ಅರ್ಜಿ ಸಲ್ಲಿಸಿರುವ ವಕೀಲ ಗೌರವ್ ಬನ್ಸಾಲ್ ಅವರು, ದೇಶದಲ್ಲಿ ಮಾನಸಿಕ ಚಿಕಿತ್ಸೆ ಕೇಂದ್ರಗಳಲ್ಲಿರುವ ಸುಮಾರು 10 ಸಾವಿರ ಜನರು ಡಿಸ್ಚಾರ್ಜ್ ಆಗಲು ಸಮರ್ಥರಿದ್ದಾರೆ. ಹಾಗಿದ್ದೂ ಅವರಿಗೆ ಬಿಡುಗಡೆ ದೊರೆತಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.