ರಾಜಭವನದಲ್ಲಿ ಏಳು ವರ್ಷಗಳ ಗುಜರಾತ್‌ ‘ವಾಲಾ’ ರಾಜ ದರ್ಬಾರ್ ಅಂತ್ಯ

ಹೈಲೈಟ್ಸ್‌:

  • ಏಳು ವರ್ಷಗಳ ‘ಗುಜರಾತ್‌ ಮಾದರಿ’ ರಾಜ ದರ್ಬಾರ್‌ ಅಂತ್ಯ
  • ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರಚಂದ್‌ ಗೆಹ್ಲೊಟ್‌ ನೇಮಕ
  • ರಾಜಭವನವನ್ನು ‘ಗುಜರಾತಿಮಯ’ ಮಾಡಿದ ಅಪಖ್ಯಾತಿಗೆ ಒಳಗಾಗಿದ್ದ ವಜುಭಾಯಿ ಆರ್‌. ವಾಲಾ
  • ಅಧಿಕಾರವಧಿಯಲ್ಲಿ ರಾಜಭವನದ ಆಯಕಟ್ಟಿನ ಜಾಗದಲ್ಲಿ ಗುಜರಾತ್‌ ಮೂಲದವರನ್ನು ನೇಮಿಸಿಕೊಂಡಿದ್ದ ವಾಲಾ

ಬೆಂಗಳೂರು: ಕರ್ನಾಟಕದ ರಾಜಭವನವನ್ನು ‘ಗುಜರಾತಿಮಯ’ ಮಾಡಿದ ಅಪಖ್ಯಾತಿಗೆ ಗುರಿಯಾಗಿದ್ದ ರಾಜ್ಯಪಾಲ ವಜುಭಾಯಿ ಆರ್‌. ವಾಲಾ ಅಧಿಕಾರಾವಧಿ ಕೊನೆಗೂ ಅಂತ್ಯಗೊಂಡಿದೆ. ಕರ್ನಾಟಕದ ರಾಜ್ಯಪಾಲರಾಗಿ ತಾವರ್‌ಚಂದ್‌ ಗೆಹ್ಲೋಟ್‌ ನೇಮಕಗೊಂಡಿದ್ದಾರೆ.

ರಾಜ್ಯದ ರಾಜ್ಯಪಾಲರಾಗಿ ವಿ.ಆರ್‌.ವಾಲಾ 2014ರ ಸೆಪ್ಟೆಂಬರ್‌ನಲ್ಲಿ ನೇಮಕಗೊಂಡಿದ್ದರು. 2019ರಲ್ಲಿ ಅವರ 5 ವರ್ಷದ ಅವಧಿ ಪೂರ್ಣಗೊಂಡಿತ್ತು. ಆದರೆ ಅವರ ಅಧಿಕಾರ ಅವಧಿ ವಿಸ್ತರಣೆಯಾಗಿತ್ತು. ಅದು ಅನಿರ್ದಿಷ್ಟಾವಧಿ ಎನ್ನುವಷ್ಟು ಮುಂದುವರಿಕೆಯಾಗಿತ್ತು. ಆದರೆ ಈ ವಿಸ್ತರಣೆ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ‘ಮುಂದಿನ ಆದೇಶದವರೆಗೆ’ ಎಂಬುದೇ ವಾಲಾ ಅವರಿಗೆ ಊರುಗೋಲಾಗುವಂತಾಗಿತ್ತು. ಹಾಗಾಗಿ ಸರಿಸುಮಾರು 7 ವರ್ಷದಿಂದ ರಾಜಭವನದಲ್ಲಿ ವಾಲಾ ಹಾಯಾಗಿದ್ದರು. ವಿಶ್ರಾಂತ ಜೀವನವನ್ನು ಅತ್ಯಂತ ವೈಭವೋಪೇತವಾಗಿ ಸಾಗಿಸುತ್ತಿದ್ದರು. ಗೆಹ್ಲೋಟ್‌ ಅವರ ನೇಮಕದೊಂದಿಗೆ ವಾಲಾ ದರ್ಬಾರಿಗೆ ಈಗ ತೆರೆ ಬಿದ್ದಂತಾಗಿದೆ.

ವಿ.ಆರ್‌.ವಾಲಾ ಅಧಿಕಾರದ ಅವಧಿಯಲ್ಲಿ ರಾಜಭವನದ ಆಯಕಟ್ಟಿನ ಜಾಗದಲ್ಲಿ ಗುಜರಾತ್‌ ಮೂಲದವರನ್ನು ನೇಮಿಸಿಕೊಂಡಿದ್ದರು. ರಾಜಭವನಕ್ಕೆ ಹೋದರೆ ಇದು ಕನ್ನಡಿಗರ ಭವನವೋ ಅಥವಾ ಗುಜರಾತಿಗರ ಭವನವೋ ಎಂದು ಭಾಸವಾಗುವಂತೆ ಇರುತ್ತಿತ್ತು. ಇದಲ್ಲದೆ ಗಣ್ಯರು ಹಾಗೂ ಸಾರ್ವಜನಿಕರ ಭೇಟಿಯನ್ನು ಬಹುತೇಕ ನಿರ್ಬಂಧಿಸಲಾಗಿತ್ತು. ಒಮ್ಮೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇವರ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ವಾಲಾ ವಾರಾಂತ್ಯದಲ್ಲಿ ಗುಜರಾತ್‌ಗೆ ತೆರಳುವುದು ಸಾಮಾನ್ಯವಾಗಿತ್ತು. ಅವರು ಕುಡಿಯುವ ನೀರನ್ನು ಗುಜರಾತ್‌ನಿಂದಲೇ ತರಿಸಿಕೊಳ್ಳುತ್ತಿದ್ದ ಬಗ್ಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಪಡೆದುಕೊಂಡಿದ್ದರು! ಇಂತಹ ವಾಲಾ ಅವರಿಂದಾಗಿ ರಾಜಭವನದ ಘನತೆಗೂ ಕುಂದು ಬರುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಜಭವನದಲ್ಲಿ ವಜುಭಾಯಿ ವಾಲಾ ದರ್ಬಾರಿನ ಬಗ್ಗೆ ‘ವಿಜಯ ಕರ್ನಾಟಕ’ದಲ್ಲಿ ಜೂನ್‌ 16ರಂದು ‘ವಾಲಾ ದಾಖಲೆ ದರ್ಬಾರ್‌’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಪತ್ರಿಕೆಯ ಈ ವರದಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *