ಸಂಪುಟ ವಿಸ್ತರಣೆ ಹೊಸ್ತಿಲಲ್ಲೇ ದೆಹಲಿ ಭೇಟಿ.. ಮುರುಗೇಶ್ ನಿರಾಣಿ ಹೇಳ್ತಿರೋದಿಷ್ಟೇ..

ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಹೊಸ್ತಿಲಲ್ಲೇ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ತೆರಳಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ…

ಕಲಬುರಗಿ : ದೆಹಲಿ ಪ್ರವಾಸದ ಬಗ್ಗೆ ಹೊಸ‌ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಹೈಕಮಾಂಡ್ ನನ್ನನ್ನು ದೆಹಲಿಗೆ ಕರೆದಿಲ್ಲ, ಇದು ಮಾಧ್ಯಮಗಳ ಸೃಷ್ಟಿ‌ ಎಂದು ಗಣಿ‌ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರತಿ 15 ದಿನಕ್ಕೊಮ್ಮೆ ದೆಹಲಿ ಪ್ರವಾಸ ಮಾಡುತ್ತೇನೆ. ಅದರಂತೆ ಮೊನ್ನೆ ಕೂಡ ಹೋಗಿದ್ದೆ. ಇದು ದಿಢೀರ್ ಭೇಟಿಯೂ ಅಲ್ಲ, ಹೈಕಮಾಂಡ್ ಬುಲಾವ್ ಕೂಡ ಅಲ್ಲ. ನಾಳೆಯೂ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ವೈಯುಕ್ತಿಕ ಕೆಲಸದ ಜೊತೆಗೆ ಇಲಾಖೆಯ ಕಾರ್ಯ ನಿಮಿತ್ತ ದೆಹಲಿಗೆ ಹೋಗುತ್ತಿರುತ್ತೇನೆ ಎಂದರು.

ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನಿಜ. ನಾನು ಮುರ್ನಾಲ್ಕು ತಿಂಗಳ ಹಿಂದೆ ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಕೆಆರ್​ಎಸ್ ಅಣೆಕಟ್ಟಿಗೆ ಅಪಾಯ ಇದೆ ಎಂಬ ಕಾರಣಕ್ಕೆ ಗಣಿಗಾರಿಕೆ ನಿಲ್ಲಿಸಲಾಗಿದೆ. ನಿನ್ನೆ ಬೇಬಿ ಬೆಟ್ಟಕ್ಕೆ ಗಣಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಳಿಸಿದ್ದೇನೆ. ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೋ, ಅಲ್ಲಿ ಸರ್ವೇ ನಡೆಸಿ ಐದು ಪಟ್ಟು ದಂಡ ಹಾಕಿದ್ದೇವೆ ಎಂದರು.

ಕೆಆರ್​ಎಸ್ ಡ್ಯಾಂಗೆ ಸಂಸದೆ ಸುಮಲತಾ ಅಂಬರೀಶ್​ ಅವರನ್ನು ಅಡ್ಡಲಾಗಿ ಮಲಗಿಸಬೇಕು ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಮಾತನಾಡಿ, ಜನರು ನಮ್ಮನ್ನು ಆಯ್ಕೆ ಮಾಡಿ ಕಳಿಸಿರುತ್ತಾರೆ. ಜನಪ್ರತಿನಿಧಿಯಾದವರು ಜವಾಬ್ದಾರಿಯುತವಾಗಿ ಮಾತಾಡಬೇಕು. ಯುವ ಪೀಳಿಗೆ ನಮ್ಮನ್ನು ಅನುಸರಿಸುತ್ತಿರುತ್ತಾರೆ. ಯಾವುದೇ ಪಕ್ಷದ ನಾಯಕರ ಬಾಯಲ್ಲಿ ಅಂತಹ ಶಬ್ದಗಳು ಬರಬಾರದು ಎಂದು ಹೇಳಿದರು.

ಕೇಂದ್ರ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಚಿವ ನಿರಾಣಿ, ಕಲಬುರಗಿಗೆ ಸಚಿವ ಸ್ಥಾನ ಸಿಗಬೇಕು ಎನ್ನುವುದು ಜನರ ಅಪೇಕ್ಷೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವುದು ಪ್ರಧಾನಿಯವರ ಪರಮಾಧಿಕಾರ. ಯಾರಿಗೆ ಮಂತ್ರಿಗಿರಿ ಸಿಗುತ್ತೆ ಅಂತಾ ನಾವೂ ಕಾಯುತ್ತಿದ್ದೇವೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *