HDK vs Sumalatha: ಸುಮಲತಾ ವಿಚಾರದಲ್ಲಿ ಸೈಲೆಂಟ್ ಆದ ಹೆಚ್ಡಿಕೆ, ಆಕೆ ನಟೋರಿಯಸ್ ಎಂದ ಶಾಸಕ ರವೀಂದ್ರ ಶ್ರೀಕಂಠಯ್ಯ !
ಮಂಡ್ಯ: ಮಂಡ್ಯ ಜಿಲ್ಲೆಯ ಗಣಿಗಾರಿಕೆ ಹಾಗೂ ಕೆಆರ್ ಎಸ್ ಅಣೆಕಟ್ಟೆ ವಿಚಾರದಲ್ಲಿ ಏಟು – ಎದಿರೇಟು ತಾರಕಕ್ಕೇರಿದ ಬೆನ್ನಲ್ಲೇ ಸಂಸದೆ ಸುಮಲತಾ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೈಲೆಂಟ್ ಆಗಿದ್ದಾರೆ. ಸುಮಲತಾ ವಿಚಾರಕ್ಕೆ ಕರೆತರಬೇಡಿ ಎಂದು ಮಂಡ್ಯದಲ್ಲಿ ಕುಮಾರಸ್ವಾಮಿ ಕೈಮುಗಿದಿದ್ದಾರೆ. ಆದ್ರೆ, ಶ್ರೀರಂಗಪಟ್ಟಣ ಶಾಸಕರು ಸುಮಲತಾ ಬಗ್ಗೆ ಇನ್ನಷ್ಟು ಸಿಟ್ಟಾಗಿದ್ದಾರೆ. ಈ ನಡುವೆ ಮೈಸೂರು ಸಂಸದ ಪ್ರತಾಪ್ ಸಿಂಹ , ಕುಮಾರಸ್ವಾಮಿ ಪರ ಬ್ಯಾಟಿಂಗ್ ಬೀದಿದ್ದು, ಸುಮಲತಾ ನಡೆಯನ್ನು ಟೀಕಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದೆಯೋ ಇಲ್ಲವೋ, ಕನ್ನಂಬಾಡಿ ಅಣೆಕಟ್ಟೆ ಬಿರುಕು ಬಿಟ್ಡಿದೆಯೋ ಇಲ್ಲವೋ, ಆದ್ರೆ ಈ ವಿಚಾರ ಮಾತ್ರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ತೀರಾ ವಿಕೋಪಕ್ಕೆ ತಿರುಗಿದಂತಹ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವುದಂತೂ ನಿಜ. ಸುಮಲತಾ ಬಗ್ಗೆ ಕುಮಾರಸ್ವಾಮಿ ಹೇಳಿದ ಹೇಳಿಕೆ, ಅದಕ್ಕೆ ಸುಮಲತಾ ಕೊಟ್ಟ ತಿರುಗೇಟು ಮಂಡ್ಯ ಜಿಲ್ಲೆ ಮಾತ್ರವಲ್ಲದೆ ರಾಜ್ಯ ರಾಜಕಾರಣದಲ್ಲೂ ಸಾಕಷ್ಟು ಸಂಚಲನ ಉಂಟುಮಾಡಿದೆ. ಈ ವಿಚಾರ ವೈಯಕ್ತಿಕ ಟೀಕೆ ಹಾಗೂ ಬೇರೆ ಬೇರೆ ಮಜಲು ಪಡೆದುಕೊಳ್ಳುತ್ತಿದ್ದಂತೆ ಕುಮಾರಸ್ವಾಮಿ ಎಚ್ಚೆತ್ತಂತೆ ಕಾಣಿಸುತ್ತಿದೆ.
ಲೋಕಸಭೆ ಚುನಾವಣೆ ವೇಳೆ ಕೇಳಿ ಬಂದ ಒಂದೊಂದು ಮಾತೂ ಮಗನ ಸೋಲಿಗೆ ಕಾರಣವಾಗಿದ್ದನ್ನು ಅರಿತಂತೆ ಕಾಣಿಸುತ್ತಿರುವ ಕುಮಾರಸ್ವಾಮಿ, ಕೆರೆದಷ್ಟೂ ಗಾಯ ಆಗುತ್ತೆ ಎಂಬುದನ್ನು ಮನಗಂಡು ಸುಮಲತಾ ವಿಚಾರದಲ್ಲಿ ಕಾರ್ಯತಂತ್ರ ಬದಲಾಯಿಸಿದ್ದಾರೆ. ಮಾಜಿ ಸಂಸದ ಜಿ.ಮಾದೇಗೌಡರ ಆರೋಗ್ಯ ವಿಚಾರಿಸುವ ಸಲುವಾಗಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಗೆ ಆಗಮಿಸಿದ ಕುಮಾರಸ್ವಾಮಿ, ನಂತರ ಮಾತನಾಡುವ ವೇಳೆಯಲ್ಲಿ ಸುಮಲತಾ ವಿಚಾರದಲ್ಲಿ ಕರೆತರಬೇಡಿ ಎಂದು ಕೈಮುಗಿದಿದ್ದಾರೆ.
ಸುಮಲತಾ ಬಗ್ಗೆ ಸಿಟ್ಟಾದ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ….
ಸುಮಲತಾರನ್ನು ನಟೋರಿಯಸ್ ಎಂದ ಟೀಕೆ
ಈ ನಡುವೆ ಕೆ.ಆರ್.ಎಸ್ ಅಣೆಕಟ್ಟೆಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ, ಅಣೆಕಟ್ಟೆ ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಅಣೆಕಟ್ಟೆ ಸುಭದ್ರವಾಗಿದೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ, ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಸುಮಲತಾ ನೀಡಿರುವ ಹೇಳಿಕೆ ಅವಿವೇಕತನದಿಂದ ಕೂಡಿದ್ದು, ಸುಮಲತಾ ನಟೋರಿಯಸ್ ಇದ್ದಾರೆ. ರಾಷ್ಟ್ರದ್ರೋಹದ ಹೇಳಿಕೆ ನೀಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅಂಬರೀಶ್ ಸಂಸದರಾಗಿದ್ದಾಗಲೇ ಅಕ್ರಮ ಗಣಿಗಾರಿಕೆ ಹುಟ್ಟುಕೊಂಡಿದೆ. ಈಗ ಅವರ ಪತ್ನಿ ಸಂಸದೆಯಾಗಿ ಗಣಿಗಾರಿಕೆ ವಿಚಾರದಲ್ಲಿ ಅವರು ನಡೆಸುತ್ತಿರುವ ಡೀಲಿಂಗ್ ಗಳ ಬಗ್ಗೆ ತಮ್ಮ ಬಳಿ ಪುರಾವೆಗಳು ಇದ್ದು ಶ್ರೀಘ್ರವೇ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.