ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಅಣ್ಣಾಮಲೈ ನೇಮಕ
ನವದೆಹಲಿ – ಮಾಜಿ ಐಪಿಎಸ್ ಅಧಿಕಾರಿ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಕುಪ್ಪು ಸ್ವಾಮಿ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.
ಅಣ್ಣಾಮಲೈ ಅವರನ್ನು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅಣ್ಣಾಮಲೈ ಅವರಿಗೆ ಮಹತ್ವದ ಹುದ್ದೆ ದೊರೆತಂತಾಗಿದೆ.
ಬರುವ 2024 ರ ಲೋಕಸಭಾ ಚುನಾವಣೆಗಳನ್ನು ಕೇಂದ್ರೀಕರಿಸಿ ಬಿಜೆಪಿ ಪಕ್ಷವು ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್ ಮುರುಗನ್ ಅವರನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಖಾತೆ ಸಚಿವರನ್ನಾಗಿ ಪ್ರಧಾನಿ ಮೋದಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೆರವಾಗಿತ್ತು.
ಆ ಸ್ಥಾನಕ್ಕೆ ಅಣ್ಣಾಮಲೈ ಉಚಿತ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಅದಂತೆಯೇ ಅಣ್ಣಾಮಲೈ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ ವಿಧಾಸನಭೆ ಚುನಾವಣೆಯಲ್ಲಿ ಪಕ್ಷ ಮತ್ತು ವೈಯಕ್ತಿವಾಗಿ ಸೋಲುಂಡ ಅಣ್ಣಾಮಲೈ ಒಂದಷ್ಟು ಭ್ರಮನಿರಸಗೊಂಡಿರುವುದಂತೂ ದಿಟ. ಆದರೆ ಅವರೊಬ್ಬ ಸಮರ್ಥ ನಾಯಕ ರೂಪುಗೊಳ್ಳುತ್ತಿದ್ದಾನೆ ಎನ್ನುತ್ತಿದೆ ತಮಿಳುನಾಡು ಬಿಜೆಪಿ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಕಟ್ಟುವಲ್ಲಿ ಕಟ್ಟಾಳಾಗಿ ಅಣ್ಣಾಮಲೈರನ್ನು ತೊಡಗಿಸಬಹುದು ಎಂಬುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ.
ಅನಿವಾರ್ಯವಾಗಿ ಅದು ದಿಲ್ಲಿ ನಾಯಕರ ಅನಿಸಿಕೆಯೂ ಆಗಿರಬಹುದು. ಹಾಗಾಗಿ ಸದ್ಯದಲ್ಲೆ ಮಾಜಿ ಐಪಿಎಸ್ ಕೆ. ಅಣ್ಣಾಮಲೈಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.
ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ವೈಯಕ್ತಿಕ ವರ್ಚಸ್ಸು, ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಪಕ್ಷವನ್ನು ಮುನ್ನಡೆಸುವ ಉತ್ಸಾಹಿಯಾಗಿದ್ದಾರೆ.