ಎರಡನೇ ಅಲೆಯ ಯುದ್ದ ಇನ್ನೂ ಮುಗಿದಿಲ್ಲ : ತಜ್ಞರ ಎಚ್ಚರಿಕೆ
ನವದೆಹಲಿ : – ದೇಶದಲ್ಲಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಆರ್ಭಟಿಸಿದ ಕೊರೊನಾ ಸೋಂಕಿನ ಎರಡನೆ ಅಲೆ ಯುದ್ದ ಇನ್ನೂ ಮುಗಿದಿಲ್ಲ.ಜನರು ನಿರ್ಲಕ್ಷ್ಯ ವಹಿಸುವುದು ಬೇಡ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅನ್ ಲಾಕ್ ಜಾರಿ ಮಾಡಲಾಗಿದೆ ಎಂದು ಬೇಜವಬ್ದಾರಿ ವರ್ತನೆ ತೋರಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಕೊರೋನೋ ಸೋಂಕಿನ ಎರಡನೇ ಅಲೆಯ ಯುದ್ದ ಇನ್ನೂ ಮುಗಿದಿಲ್ಲ ಜನರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಪಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಹಳೆಯ ಕೊರೊನಾ ಸೋಂಕು ಪೂರ್ಣಗೊಂಡಿಲ್ಲ, ಇನ್ನೂ ಅಪಾಯಕಾರಿ.ಹೀಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ಜನರು ತಪ್ಪದೆ ಪಾಲಿಸಬೇಕು ಇಲ್ಲದಿದ್ದರೆ ಅಪಾಯ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇತ್ತೀಚೆಗೆ ಜನರು ಮಾಸ್ಕ್ ಧರಿಸದೇ ಒಡಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅದರಲ್ಲೂ ಪ್ರವಾಸಿತಾಣಗಳಲ್ಲಿ ಪ್ರವಾಸಿಗರು ಸಾಮಾಜಿಕ ಅಂತರಕ್ಕೆ ಒತ್ತು ನೀಡದೆ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಈ ರೀತಿ ಮಾಡುವುದು ಇಂತಹ ಸಮಯದಲ್ಲಿ ಒಳ್ಳೆಯ ಲಕ್ಷಣವಲ್ಲ ಹೀಗಾಗಿ ಎಚ್ಚರಿಕೆವಹಿಸಿ ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಪಾಯ ಆಹ್ವಾನಿಸಿದಂತೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ಮಾತನಾಡಿ, ಮಾಸ್ಕ್ ಧರಿಸದೆ ಹೋರಾಡುವುದು ಅಪಾಯವನ್ನು ತಾವೇ ಆಹ್ವಾನಿಸಿಕೊಂಡಂತೆ ಇಂತಹದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ.
ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಸೋಂಕು ನಿಯಂತ್ರಣ ಮಾಡಬಹುದು ಇಲ್ಲದಿದ್ದರೆ ನಿರ್ಲಕ್ಷ್ಯ ತೋರಿದರೆ ಮತ್ತಷ್ಟು ಸೋಂಕಿನ ಪ್ರಮಾಣ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಪ್ರಮಾಣ ನಿತ್ಯ ಏರಿಕೆಯಾಗುತ್ತದೆ ಅಲ್ಲದೆ ದೇಶದ 66 ಜಿಲ್ಲೆಗಳಲ್ಲಿ ಶೇಕಡ 10 ಕ್ಕಿಂತಲೂ ಹೆಚ್ಚಿನ ಪಾಸಿಟಿವಿಟಿ ಪ್ರಮಾಣ ಇದೆ ಇದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ಶೇಕಡ 53ರಷ್ಟು ಸೋಂಕು ಪ್ರಕರಣಗಳು ಮಹಾರಾಷ್ಟ್ರ (ಶೇ.21) ಮತ್ತು ಕೇರಳದಿಂದಲೇ (ಶೇ.32) ದಾಖಲಾಗುತ್ತಿದೆ ಎಂದರು
ಇನ್ನು ದೇಶದ 86 ಜಿಲ್ಲೆಗಳಲ್ಲಿ ಪ್ರತಿನಿತ್ಯ ನೂರಕ್ಕೂ ಕಡಿಮೆ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ
ಶೇಕಡ 80ರಷ್ಟು ಸೋಂಕು ಪ್ರಕರಣಗಳು 90 ಜಿಲ್ಲೆಯಲ್ಲಿ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಹೀಗಾಗಿ ಈ ಜಿಲ್ಲೆಗಳು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಮತ್ತು ಅನಿವಾರ್ಯ ಎಂದು ಅವರು ಹೇಳಿದರು