ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಜೆಡಿಎಸ್ ನಾಯಕರು ಲಾಭ ಪಡೆಯುತ್ತಿದ್ದಾರೆ: ಸಂಸದೆ ಸುಮಲತಾ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ನಡುವಿನ ಮಾತಿನ ಚಕಮಕಿ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಜೆಡಿಎಸ್ ನಾಯಕರು ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಸೇರಿದಂತೆ ಮಂಡ್ಯದ ಜೆಡಿಎಸ್ ಶಾಸಕರು ಪದೇ ಪದೇ ತಮ್ಮ ಅಗಲಿದ ಪತಿ ಅಂಬರೀಷ್ ಅವರ ಹೆಸರನ್ನು ಪ್ರಸ್ತಾಪಿಸಿ ತಮ್ಮ ಮೇಲೆ ಆರೋಪ ಮಾಡುತ್ತಿರುವುದಕ್ಕೆ ಸಹ ಸುಮಲತಾ ಚಕಾರವೆತ್ತಿದ್ದಾರೆ.

ರಾಜಕಾರಣಿಗಳು ಅಕ್ರಮ ಕೆಲಸಗಳನ್ನು ನೇರವಾಗಿ ಮಾಡುವುದಿಲ್ಲ, ಬೇನಾಮಿ ಹೆಸರಿನಲ್ಲಿ ಮಾಡಿಸುವುದು ಎಲ್ಲರಿಗೂ ಗೊತ್ತಿರುವ ರಹಸ್ಯವದು. ಜೆಡಿಎಸ್ ನಾಯಕರು ಈ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರದಿದ್ದರೆ ನನ್ನ ಮಾತಿಗೆ ಅದೇಕೆ ಅಷ್ಟು ಸಿಟ್ಟಾಗುತ್ತೀರಿ, ನಿಮ್ಮ ಕಟುವಾದ ಪ್ರತಿಕ್ರಿಯೆಗಳನ್ನು ನೋಡಿದರೆ ಅಕ್ರಮ ಗಣಿಗಾರಿಕೆಯಿಂದ ನೀವು ಲಾಭ ಪಡೆಯುತ್ತಿದ್ದೀರೆಂದು ಅನಿಸುತ್ತಿದೆ ಎಂದು ನಿನ್ನೆ ಸುಮಲತಾ ನೇರವಾಗಿ ಆರೋಪ ಮಾಡಿದ್ದಾರೆ.

ಮೊನ್ನೆ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಪರಿಶೀಲನೆಗೆ ಹೋಗಿದ್ದಾಗ, ನಾನು ಹೋಗದಂತೆ ತಡೆಯಲು ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಮಣ್ಣನ್ನು ಹಾಕಿ ರಸ್ತೆಯನ್ನು ಮುಚ್ಚಲಾಗಿತ್ತು. ಈ ವಿಷಯವನ್ನು ಮುಖ್ಯಮಂತ್ರಿಗಳು ಮತ್ತು ಗಣಿ ಸಚಿವರ ಬಳಿ ಪ್ರಸ್ತಾಪಿಸುತ್ತಾನೆ, ತನಿಖೆಗೆ ಒತ್ತಾಯಿಸುತ್ತೇನೆ ಎಂದಿದ್ದಾರೆ.

ಸುಮಲತಾ ಮತ್ತು ಹೆಚ್ ಡಿಕೆ ನಡುವೆ ವಾಕ್ಸಮರ ಆರಂಭವಾಗಿದ್ದು ಕಳೆದ ಜುಲೈ 5ರಂದು. ಮಂಡ್ಯದ ಮೈಶುಗರ್ ಫ್ಯಾಕ್ಟರಿಯನ್ನು ಖಾಸಗಿ ಕಂಪೆನಿಗಳಿಗೆ ಲೀಸ್ ಗೆ ಕೊಡುವ ವಿಚಾರದಲ್ಲಿ ಮತ್ತು ಕೆಆರ್ ಎಸ್ ಜಲಾಶಯ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸುಮಲತಾ ಅವರು ಮಾಡಿದ್ದ ಆರೋಪಕ್ಕೆ ಹೆಚ್ ಡಿ ಕುಮಾರಸ್ವಾಮಿ ವೈಯಕ್ತಿಕವಾಗಿ ಆರೋಪ ಮಾಡಿದ್ದರು.

ಸುಮಲತಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಅಂಬರೀಷ್ ಅವರು ಸಂಸದರಾಗಿದ್ದ ಕಾಲದಲ್ಲಿಯೇ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಆರಂಭವಾಗಿತ್ತು ಎಂದು ಆರೋಪಿಸಿದ್ದರು, ಇದಕ್ಕೆ ನಿನ್ನೆ ಪ್ರತಿಕ್ರಿಯಿಸಿರುವ ಸುಮಲತಾ ಇದು ಬೇಜವಾಬ್ದಾರಿಯ ಹೇಳಿಕೆ, ಅಂಬರೀಷ್ ಅವರ ಕಾಲದಲ್ಲಿ ಅಕ್ರಮ ಗಣಿಗಾರಿಕೆ ಆರಂಭವಾಗಿದ್ದರೆ ದಾಖಲೆಗಳನ್ನು, ಸಾಕ್ಷ್ಯಗಳನ್ನು ತೋರಿಸಿ, ಇಷ್ಟು ಸಮಯ ಏಕೆ ಸುಮ್ಮನಿದ್ದಿರಿ ಎಂದು ಪ್ರಶ್ನಿಸಿದ್ದಾರೆ.

ಮಂಡ್ಯದ ಜನತೆ ಮತ್ತು ಅಂಬರೀಷ್ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಇದಕ್ಕೆ ಪ್ರತಿಕ್ರಿಯಿಸಲಿದ್ದಾರೆ ಎಂದಿದ್ದಾರೆ. ಎಲ್ಲರ ಮುಂದೆ ಅಂಬರೀಷ್ ನನ್ನ ಆಪ್ತ ಸ್ನೇಹಿತ ಎಂದು ಹೇಳುತ್ತಿರುವ ಕುಮಾರಸ್ವಾಮಿಯವರು ಶ್ರೀರಂಗಪಟ್ಟಣ ಶಾಸಕರು ಇಂತಹ ಹೇಳಿಕೆ ನೀಡುವಂತೆ ಪ್ರೇರೇಪಿಸುತ್ತಿದ್ದಾರೆ ಎಂದಿದ್ದಾರೆ.

ಮಂಡ್ಯದ ಜೆಡಿಎಸ್ ಶಾಸಕರು ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರವೆಸಗುತ್ತಿದ್ದಾರೆ ಎಂದು ಆರೋಪಿಸಿರುವ ಸುಮಲತಾ ಅಲ್ಲಿನ ಅಕ್ರಮಗಳನ್ನು ಬಯಲಿಗೆಳೆಯಲು ಪ್ರಯತ್ನಿಸುತ್ತಿರುವ ತಮ್ಮ ಧ್ವನಿಯನ್ನು ಹತ್ತಿಕ್ಕಲು ನೋಡುತ್ತಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *