ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ತೆಗೆದುಕೊಳ್ಳಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಹೈಲೈಟ್ಸ್‌:

  • ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ದಿಲ್ಲಿ ಹೈಕೋರ್ಟ್ ಒಲವು
  • ಆಧುನಿಕ ಭಾರತೀಯ ಸಮಾಜದ ಸನ್ನಿವೇಶದಲ್ಲಿ ಏಕರೂಪದ ಸಂಹಿತೆ ಅಗತ್ಯ
  • ವಿವಿಧ ಸಮುದಾಯ, ಜಾತಿಗಳಿಗೆ ಸೇರಿದವರು ಮದುವೆ ವಿಚಾರದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ
  • ಹಲವು ಬಾರಿ ಚರ್ಚೆಯಾಗಿದ್ದರೂ ಇದರ ಜಾರಿಗೆ ಬಗ್ಗೆ ಕ್ರಮಗಳನ್ನು ತೆಗೆದುಕೊಂಡಿಲ್ಲ

ಹೊಸದಿಲ್ಲಿ: ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವನ್ನು ದಿಲ್ಲಿ ಹೈಕೋರ್ಟ್ ಪ್ರತಿಪಾದಿಸಿದೆ. ‘ಸಂವಿಧಾನದ 44ನೇ ವಿಧಿಯಲ್ಲಿ ವ್ಯಕ್ತಪಡಿಸಿರುವಂತೆ ತನ್ನ ನಾಗರಿಕರನ್ನು ಸಮಾನ ನಾಗರಿಕ ಸಂಹಿತೆ ಮೂಲಕ ರಕ್ಷಿಸುವ ಅವಕಾಶವು ಕೇವಲ ಭರವಸೆಯಾಗಿಯೇ ಉಳಿಯಬಾರದು’ ಎಂದು ಅದು ಹೇಳಿದೆ.

ದೇಶದಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಅನ್ವಯಿಸುವ ಸಂಹಿತೆಯ ಅಗತ್ಯವಿದೆ ಎಂದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ಈ ವಿಚಾರದಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪರಸ್ಪರ ಬೇರ್ಪಟ್ಟಿರುವ ದಂಪತಿಯ ವಿಚ್ಚೇದನ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇಂದಿನ ಆಧುನಿಕ ಭಾರತೀಯ ಸಮಾಜವು ಕ್ರಮೇಣವಾಗಿ ಏಕರೂಪವಾಗುತ್ತಿದೆ. ಧರ್ಮ, ಸಮುದಾಯ ಮತ್ತು ಜಾತಿಯ ಸಾಂಪ್ರದಾಯಿಕ ಬೇಲಿಗಳು ನಿಧಾನವಾಗಿ ಮರೆಯಾಗುತ್ತಿವೆ’ ಎಂದು ಅವರು ಹೇಳಿದ್ದಾರೆ.

‘ಮದುವೆ ಹಾಗೂ ವಿಚ್ಚೇದನಕ್ಕೆ ಸಂಬಂಧಿಸಿದಂತಹ ವಿಚಾರಗಳಲ್ಲಿ ವಿವಿಧ ವೈಯಕ್ತಿಕ ಕಾನೂನುಗಳಲ್ಲಿನ ಸಂಘರ್ಷ ಮತ್ತು ವಿರೋಧಾಭಾಸಗಳಿಂದಾಗಿ ನಾಗರಿಕರು ಒದ್ದಾಡುವಂತಾಗಬಾರದು. ವೈಯಕ್ತಿಕ ಕಾನೂನು ವಿಚಾರ ಬಂದಾಗ ನ್ಯಾಯಾಲಯಗಳು ನಿರಂತರವಾಗಿ ಸಂಘರ್ಷಕ್ಕೆ ಎದುರಾಗುತ್ತವೆ. ವಿವಿಧ ಸಮುದಾಯಗಳು, ಜಾತಿಗಳು ಹಾಗೂ ಧರ್ಮಗಳಿಗೆ ಸೇರಿದ, ವೈವಾಹಿಕ ಬಾಂಧವ್ಯಕ್ಕೆ ಒಳಪಟ್ಟ ಜನರು ಅಂತಹ ಸಂಘರ್ಷಗಳಿಂದ ಹೆಣಗಾಡುತ್ತಾರೆ’ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.

‘ಮದುವೆ, ವಿಚ್ಚೇದನ, ಉತ್ತರಾಧಿಕಾರ ಮುಂತಾದ ವಿವಿಧ ಅಂಶಗಳಲ್ಲಿ ಸಮಾನ ನೀತಿಗಳು ಅನ್ವಯಿಸಬೇಕು. ಇದರಿಂದ ತತ್ವಗಳು, ಸುರಕ್ಷತೆಗಳು ಮತ್ತು ಪ್ರಕ್ರಿಯೆಗಳನ್ನು ಅಳವಡಿಸಬಹುದು ಎಂದು ಸುಪ್ರೀಂಕೋರ್ಟ್ ಪದೇ ಪದೇ ಪ್ರತಿಪಾದಿಸಿದೆ’ ಎಂದು ಶಾ ಬಾನೊ ತೀರ್ಪನ್ನು ಉಲ್ಲೇಖಿಸಿ ಹೈಕೋರ್ಟ್ ಹೇಳಿದೆ. ಈ ನಿರ್ಧಾರಗಳನ್ನು 1985ರಲ್ಲಿ ತೆಗೆದುಕೊಳ್ಳಲಾಗಿತ್ತು. 35 ವರ್ಷಕ್ಕೂ ಹೆಚ್ಚು ಸಮಯ ಕಳೆದರೂ ಅದು ಜಾರಿಯಾಗಿಲ್ಲ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

‘ಈ ಸಂಬಂಧ ಇದುವರೆಗೂ ಯಾವ ಕ್ರಮಗಳನ್ನೆಲ್ಲ ತೆಗೆದುಕೊಳ್ಳಲಾಗಿದೆ ಎಂದು ಅಸ್ಪಷ್ಟವಾಗಿದೆ’ ಎಂದ ಹೈಕೋರ್ಟ್, ತನ್ನ ಆದೇಶವನ್ನು ಅಗತ್ಯ ಕ್ರಮ ತೆಗೆದುಕೊಳ್ಳುವ ಸಲುವಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯ, ಕಾರ್ಯದರ್ಶಿಗೆ ತಲುಪಬೇಕು ಎಂದು ಸೂಚಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *