ಆಕ್ಸಿಜನ್ ಜನರೇಷನ್ ಮೂಲಸೌಕರ್ಯ ತಕ್ಷಣವೇ ಸಿದ್ಧಗೊಳಿಸಿ: ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ

ಹೈಲೈಟ್ಸ್‌:

  • ಆಕ್ಸಿಜನ್ ಸೃಷ್ಟಿ ಕುರಿತು ಅಧಿಕಾರಿಗಳ ಜತೆ ಪ್ರಧಾನಿ ಮೋದಿ ಸಭೆ
  • ದೇಶಾದ್ಯಂತ 1500 ಪಿಎಸ್‌ಎ ಆಕ್ಸಿಜನ್ ಜನರೇಟರ್ ಘಟಕ ನಿರ್ಮಾಣ
  • ಸಾಕಷ್ಟು ಸಂಖ್ಯೆಯ ಸಿಬ್ಬಂದಿಗೆ ತರಬೇತಿ ನೀಡಲು ಸೂಚನೆ

ಹೊಸದಿಲ್ಲಿ: ರಾಜ್ಯಗಳೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತಕ್ಷಣವೇ ದೇಶಾದ್ಯಂತ 1,500 ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಷನ್ (ಪಿಎಸ್‌ಎ) ಆಕ್ಸಿಜನ್ ಜನರೇಟರ್‌ಗಳ ಕಾರ್ಯಾಚರಣೆ ಆರಂಭಿಸುವಂತೆ ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ತೀವ್ರಗೊಂಡ ಸಂದರ್ಭದಿಂದಲೂ ಆಕ್ಸಿಜನ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಎರಡನೆಯ ಅಲೆ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಬಹುತೇಕ ರಾಜ್ಯಗಳು ಆಕ್ಸಿಜನ್ ಕೊರತೆ ಎದುರಿಸಿದ್ದರಿಂದ ನೂರಾರು ಮಂದಿ ಜೀವ ಕಳೆದುಕೊಂಡಿದ್ದರು. ಪಿಎಂ ಕೇರ್ಸ್ ಫಂಡ್ ಮೂಲಕ ಪಿಎಸ್‌ಎ ಘಟಕಗಳ ಸ್ಥಾಪನೆ ಮಾಡುವಂತೆ ಕಳೆದ ವರ್ಷ ಆದೇಶಿಸಲಾಗಿತ್ತು.

ಎರಡನೆಯ ಅಲೆ ಇನ್ನೂ ನಿಯಂತ್ರಣಕ್ಕೆ ಬಾರದ ಮತ್ತು ಮೂರನೇ ಅಲೆ ಕುರಿತು ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಪ್ರಧಾನಿ ಶುಕ್ರವಾರ ಸಭೆ ನಡೆಸಿದ್ದರು. ಸರಕಾರದ ವತಿಯಿಂದ ನಡೆಸಲಾಗುತ್ತಿರುವ ಪಿಎಸ್‌ಎ ಘಟಕಗಳ ನಿರ್ಮಾಣ ಪೂರ್ಣಗೊಂಡರೆ, ಅವು 4 ಲಕ್ಷಕ್ಕೂ ಅಧಿಕ ಆಕ್ಸಿಜನೇಟೆಡ್ ಹಾಸಿಗೆಗಳಿಗೆ ನೆರವು ನೀಡಲು ಸಾಧ್ಯವಾಗಲಿದೆ.

‘ಆಕ್ಸಿಜನ್ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಕ್ತ ತರಬೇತಿ ದೊರಕಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಿ ನಿರ್ದೇಶಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ತರಬೇತಿ ಹೊಂದಿದ ಸಿಬ್ಬಂದಿ ಸಾಕಷ್ಟು ಲಭ್ಯವಿರಬೇಕು ಎಂದೂ ಹೇಳಿದ್ದಾರೆ. ಪರಿಣತರು ತರಬೇತಿ ಮಾದರಿಯೊಂದನ್ನು ಸಿದ್ಧಪಡಿಸಿದ್ದಾರೆ ಮತ್ತು ದೇಶಾದ್ಯಂತ ಸುಮಾರು 8,000 ಜನರಿಗೆ ತರಬೇತಿ ನೀಡುವ ಗುರಿ ಹೊಂದಿದ್ದಾರೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ಆಕ್ಸಿಜನ್ ಸ್ಥಾವರಗಳ ಕಾರ್ಯಾಚರಣೆ ಹಾಗೂ ದಕ್ಷತೆಯನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದಾಖಲಿಸಲು ಐಒಟಿಯಂತಹ ಆಧುನಿಕ ತಂತ್ರಜ್ಞಾನ ಬಳಸುವಂತೆ ಮೋದಿ ಸಲಹೆ ನೀಡಿದ್ದಾರೆ. ಆಕ್ಸಿಜನ್ ಸ್ಥಾವರಗಳ ಕಾರ್ಯದಕ್ಷತೆಯನ್ನು ಐಒಟಿ ಬಳಸಿ ಪರಿಶೀಲಿಸುವ ಪ್ರಾಥಮಿಕ ಚಟುವಟಿಕೆಗಳನ್ನು ನಡೆಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *